ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪುರಸಭೆಗೆ ಖಡಕ್ ಸೂಚನೆಗಳನ್ನು ನೀಡಿದೆ.
ಮಂಡಳಿಯ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ನೇತೃತ್ವದಲ್ಲಿ ಸೋಮವಾರ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಹಾಗೂ ಸಹಾಯಕ ಅಧಿಕಾರಿ ವಿವೇಕ್ ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹಗೊಳ್ಳುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ವಾಹನಗಳಿಗೆ ಕಸ ವರ್ಗಾಯಿಸುವ ಸ್ಥಳವನ್ನು ನೋಡಿ ಪುರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ಕಸದ ರಾಶಿಯಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಸ್ಥಳೀಯರಾದ ಡಾ. ಬಾಲಕೃಷ್ಣ, ರಾಜೇಂದ್ರ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕಸ ಎಸೆಯುವವರ ಬಗ್ಗೆ ನಿಗಾ ವಹಿಸಲು ಸಿಸಿ ಕ್ಯಾಮಾರ ಅಳವಡಿಸುವಂತೆ ಪಿಯೂಸ್ ರೋಡ್ರಿಗಸ್ ಸೂಚಿಸಿದರು.
ಸ್ಥಳೀಯರ ಸಲಹೆಯ ಮೇರೆಗೆ ಕಸ ರಾಶಿ ಬೀಳುತ್ತಿರುವ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಅಥವಾ ಹೂವಿನ ಗಿಡಗಳ ಪಾರ್ಕ್ ಮಾಡಿ ಸಮಸ್ಯೆ ಬಗೆ ಹರಿಸುವುದಾಗಿ ಮುಖ್ಯಾಧಿಕಾರಿ ರೇಖ ಶೆಟ್ಟಿ ತಿಳಿಸಿದರು. ಈ ಸಂದರ್ಭ ಸ್ವರ್ಣೋದ್ಯಮಿ ಸುನೀಲ್ ಅವರು ಇದಕ್ಕೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಪಾಣೆಮಂಗಳೂರು ,ಬಡ್ಡಕಟ್ಟೆ, ಜಕ್ರಿಬೆಟ್ಟು, ಲೊರೆಟ್ಟೋ ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆರೋಗ್ಯಾಧಿಕಾರಿ ರತ್ನಪ್ರಸಾದ್ ಜತೆಗಿದ್ದರು.
Be the first to comment on "ತ್ಯಾಜ್ಯ ವಿಲೇವಾರಿ: ಪುರಸಭೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ"