ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ ಹವ್ಯಕ ಮಂಡಲಗಳ ಮುಷ್ಠಿಭಿಕ್ಷಾ ಯೋಜನೆಯ ನೇತೃತ್ವದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ‘ಭಿಕ್ಷಾಂದೇಹಿ ಅಭಿಯಾನಂ’ ಯೋಜನೆಯನ್ವಯ ಸಂಗ್ರಹಿಸಲಾದ 22 ಕ್ವಿಂಟಾಲ್ ಅಕ್ಕಿಯನ್ನು ಮಂಗಳವಾರ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹಸ್ತಾಂತರಿಸಲಾಯಿತು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಿಂದ ಶಾಲಾ ಮಕ್ಕಳ ಊಟಕ್ಕಾಗಿ ನಿರಂತರವಾಗಿ ಬರುತ್ತಿದ್ದ ಅಕ್ಕಿಯನ್ನು ತಡೆಹಿಡಿದ ಕರ್ನಾಟಕ ಸರಕಾರದ ಧೋರಣೆಯಿಂದಾಗಿ ಸಹಸ್ರಾರು ವಿದ್ಯಾರ್ಥಿಗಳ ಊಟಕ್ಕೆ ಸಂಕಷ್ಟ ಬಂದೊದಗಿರುವುದನ್ನು ಮನಗಂಡು ಶ್ರೀಗಳ ಕರೆಯಂತೆ ಶಿಷ್ಯವೃಂದದವರ ತಕ್ಷಣ ಸ್ಪಂದನದಿಂದಾಗಿ ಅಕ್ಕಿಯನ್ನು ಸಂಗ್ರಹಿಸಲಾಗಿತ್ತು.
ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಅನ್ನವೆಂಬುದು ದೇವರು ಕೊಡುವ ಭಾಗ್ಯ ಪ್ರಸಾದವಾಗಿದೆ, ಶ್ರೀರಾಮಚಂದ್ರಾಪುರ ಮಠದ ಶ್ರೀಗಳವರು ಕಳೆದ ಹಲವಾರು ದಶಕಗಳಿಂದ ಶ್ರೀರಾಮವಿದ್ಯಾಕೇಂದ್ರಕ್ಕೆ ಅಭಯಹಸ್ತವನ್ನು ನೀಡುತ್ತಾ ಬಂದಿದ್ದು, ಇತ್ತೀಚೆಗೆ ಶ್ರೀಗಳು ಗೋಶಾಲೆಗೆ ಗೋವನ್ನು ನೀಡಿ ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಿರುತ್ತಾರೆ. ಪ್ರಸ್ತುತ ಈ ತುರ್ತು ಸಂದರ್ಭದಲ್ಲೂ ನಮ್ಮನ್ನು ಆಶೀರ್ವದಿಸಿದ್ದಾರೆ ಎಂದು ಶ್ರೀರಾಮಚಂದ್ರಾಪುರ ಮಠದ ಕಾರ್ಯವನ್ನು ಶ್ಲಾಘಿಸಿದರು.
ಕರ್ನಾಟಕದ ಮಾಜಿ ಸಚಿವ ಜನಾರ್ಧನ ರೆಡ್ಡಿ ಉಪಸ್ಥಿತರಿದ್ದು ಶ್ರೀರಾಮಚಂದ್ರಾಪುರ ಮಠದ ಕಾರ್ಯವನ್ನು ಶ್ಲಾಘಿಸಿ, ದೇಶೀ ಗೋವುಗಳ ಆಂದೋಲನದಲ್ಲಿ ಪ್ರೇರಿತನಾಗಿದ್ದು, ಅಭಯಾಕ್ಷರ ಆಂದೋಲನಕ್ಕೆ ಹಸ್ತಾಂತರವನ್ನು ನೀಡಿರುತ್ತೇನೆ ಎಂದರು.
ಈ ಸಂದರ್ಭ ಮುಳ್ಳೇರಿಯ ಮಂಡಲಾಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್, ಮಂಗಳೂರು ಮಂಡಲಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಸೇರಾಜೆ, ಉಪ್ಪಿನಂಗಡಿ ಮಂಡಲಾಧ್ಯಕ್ಷ ಅಶೋಕ ಕೆದ್ಲ, ಮಹಾಮಂಡಲ ಉಲ್ಲೇಖ ವಿಭಾಗ ಪ್ರಧಾನ ಗೋವಿಂದ ಬಳ್ಳಮೂಲೆ, ಮಂಡಲ ಕಾರ್ಯದರ್ಶಿಗಳಾದ ಬಾಲಸುಬ್ರಹ್ಮಣ್ಯ ಸರ್ಪಮಲೆ, ನಾಗರಾಜ ಭಟ್ ಪೆದಮಲೆ, ಶ್ರೀಧರ ಕೂವೆತ್ತಂಡ, ಪದಾಧಿಕಾರಿಗಳಾದ ರಾಜಾರಾಮ ಭಟ್, ಸತ್ಯನಾರಾಯಣ ಭಟ್ ಮೊಗ್ರ, ಕುಮಾರ ಸುಬ್ರಹ್ಮಣ್ಯ ಪೈಸಾರಿ, ಶ್ರೀಕೃಷ್ಣ ಭಟ್ ಮೀನಗದ್ದೆ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ನವನೀತ ಕೈಪಂಗಳ, ವೈ.ಕೆ.ಗೋವಿಂದ ಭಟ್, ಕೇಶವ ಪ್ರಸಾದ ಎಡೆಕ್ಕಾನ, ಮಾತೃ ಪ್ರಧಾನರಾದ ಕುಸುಮ ಪೆರ್ಮುಖ, ಸುಮಾ ರಮೇಶ್ ಮತ್ತು ವಿವಿಧ ವಲಯಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶ್ರೀ ಮಠದ ಅಭಿಮಾನಿಗಳು ಉಪಸ್ಥಿತರಿದ್ದರು. ಶ್ರೀಮಠದಿಂದ ಈಗಾಗಲೇ ೭ ಕ್ವಿಂಟಾಲಿಗೂ ಮಿಕ್ಕಿ ಅಕ್ಕಿಯನ್ನು ಸಂಗ್ರಹಿಸಿ ಹಸ್ತಾಂತರಿಸಲಾಗಿದೆ ಎಂದು ಮಠದ ವಕ್ತಾರರು ತಿಳಿಸಿರುತ್ತಾರೆ.
Be the first to comment on "ಶ್ರೀರಾಮ ವಿದ್ಯಾಕೇಂದ್ರಕ್ಕೆ 22 ಕ್ವಿಂಟಲ್ ಅಕ್ಕಿ ಹಸ್ತಾಂತರ"