ಬಿ.ಸಿ.ರೋಡ್ ತಲಪಾಡಿಯ ಮಫತ್‌ಲಾಲ್ ಲೇಔಟ್ ಭೂಸ್ವಾಧೀನ ವಿವಾದ ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಈ ವಿಚಾರದಲ್ಲಿ ಆಡಳಿತ ಸಮರ್ಪಕ ನಿರ್ವಹಣೆಯಲ್ಲಿ ವಿಫಲಗೊಂಡಿದ್ದು, ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ, ಇದು ಸರಿಯಲ್ಲ ಎಂದು ಆರೋಪಿಸಿ ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.
ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ನಾಯಕ, ಹಿರಿಯ ಸದಸ್ಯ ಎ. ಗೋವಿಂದ ಪ್ರಭು, ಆಡಳಿತ ವರ್ಗ ಸಹಿತ ಅಧ್ಯಕ್ಷರನ್ನು ನೇರ ತರಾಟೆ ತೆಗೆದುಕೊಂಡರು.
ಲೇಔಟ್ ವಿವಾದ 6 ತಿಂಗಳಿನಿಂದ ಚರ್ಚೆಯಾಗುತ್ತಿದ್ದರೂ, ಪುರಸಭಾಧಿಕಾರಿ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಅವರಿಗೆ ಸರಕಾರದ ಒತ್ತಡ ಇದೆಯೇ ಎಂದು ಆರೋಪಿಸಿದ ಪ್ರಭು, ೨ ತಿಂಗಳ ಹಿಂದೆ ಸರ್ವೆ ನಡೆಸಲು ನಿರ್ಣಯಿಸಲಾಗಿದ್ದರೂ, ಈ ಪ್ರಕ್ರಿಯೆ ಕೂಡ ಪೂರ್ಣಗೊಂಡಿಲ್ಲ ಎಂದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ದೇವದಾಸ ಶೆಟ್ಟಿ ಈ ಪ್ರಕರಣದ ಬಗ್ಗೆ ತನಿಖಾ ಹಂತದಲ್ಲಿರುವಾಗಲೇ ಯಾವ ಆಧಾರದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ ಎಂದು ಪ್ರಶ್ನಿಸಿದರು.
ಮಫತ್‌ಲಾಲ್ ಬಡಾವಣೆಯ ಬಗ್ಗೆ ಮಾತ್ರ ನಿಮ್ಮದು ತಕರಾರು ಏನು? ಉಳಿದ ಲೇಔಟ್, ವಸತಿ ಸಮುಚ್ಛಯದ ಬಗ್ಗೆ ನಿಮ್ಮದು ತಕರಾರು ಇಲ್ಲವೇಕೆ? ಎಂದು ಏರು ಧ್ವನಿಯಲ್ಲಿ ಸದಸ್ಯ ಮಹಮ್ಮದ್ ಶರೀಫ್ ಪ್ರಶ್ನಿಸಿದಾಗ ಗೋವಿಂದ ಪ್ರಭು ಮತ್ತು ಶರೀಫ್ ನಡುವೆ ಮಾತಿನ ಜಟಪಟಿ ನಡೆಯಿತು.
ವಿಪಕ್ಷ ಸದಸ್ಯರು ಹೇಳಿದಂತೆ ಯಾವುದೇ ಉಲ್ಲಂಘನೆ ನಡೆದಿಲ್ಲ. ಕಾನೂನುಬದ್ದವಾಗಿ ಬಿಲ್ ಪಾವತಿಸಲಾಗಿದೆ ಎಂದು ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಸಮರ್ಥನೆ ನೀಡಿದರು. ಅಧಿಕಾರಿಗಳ ಮಾತಿಗೆ ಒಪ್ಪದ ವಿಪಕ್ಷ ಸದಸ್ಯರು, ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಕೂಡ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಬಿಲ್ ಪಾವತಿಗೆ ಲಿಖಿತ ಆಕ್ಷೇಪ ಸಲ್ಲಿಸಿ ಸಭೆಯಿಂದ ಹೊರ ನಡೆಸಿದರು.
ವಿಪಕ್ಷ ಸದಸ್ಯರು ಕೇವಲ ಪ್ರಚಾರದ ದೃಷ್ಟಿಯಿಂದ ಮಾತ್ರ ಸಭಾ ತ್ಯಾಗ ಮಾಡುತ್ತಿದ್ದಾರೆ. ಇವರಿಗೆ ಕೇವಲ ಕಾಂಗ್ರೆಸ್ ಕಚೇರಿ ಮತ್ತು ಮಫತ್ ಲಾಲ್ ಬಿಟ್ಟರೆ ಬೇರೇನು ಕಾಣುವುದಿಲ್ಲ. ಅವರು ಹೋಗುವುದಾದರೆ ಹೋಗಲಿ ಎಂದು ಸದಸ್ಯ ಮಹಮ್ಮದ್ ಶರೀಫ್ ಟೀಕಿಸಿದರು.
ಪುರಸಭಾ ವ್ಯಾಪ್ತಿಯಲ್ಲಿರುವ ಬಹುಮಹಡಿ ಸಹಿತ ಎಲ್ಲಾ ಕಟ್ಟಡಗಳಲ್ಲಿ ಅದ್ಯತೆಯ ನೆಲೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಲು ಕ್ರಮಕೈಗೊಳ್ಳಬೇಕು, ಆ ಕ್ಯಾಮರಗಳು ಕೇವಲ ಅಂಗಡಿಯೊಳಗೆ ಸೀಮಿತವಾಗದೆ ರಸ್ತೆಗೂ ಮುಖ ಮಾಡಿರಬೇಕು , ಇದರಿಂದ ನಡೆಯಬಹುದಾದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಲಭವಾಗಬಹುದು ಎಂದು ಸದಸ್ಯ ಸದಾಶಿವ ಬಂಗೇರ ನೀಡಿದ ಸಲಹೆಗೆ ಸದಸ್ಯರಿಂದ ಸಹಮತ ವ್ಯಕ್ತವಾಯಿತು. ಕಟ್ಟಡ,ಅಂಗಡಿ ಮಾಲಕರು ಪರವಾನಿಗೆ ಪಡೆಯಲು ಅಥವಾ ನವೀಕರಣ ಸಂದರ್ಭ ಅವರಿಗೆ ಈ ನಿರ್ದೇಶನ ನೀಡುವಂತೆ ಸದಸ್ಯರು ಸೂಚಿಸಿದರು.
ಜಕ್ರಿಬೆಟ್ಟು ನೇತ್ರಾವತಿ ನದಿ ತೀರದಲ್ಲಿ ಸಸಿ ನೆಡುವ ಸಂದರ್ಭ ಆಹ್ವಾನಿಸದಕ್ಕೆ ಸದಸ್ಯೆ ವಸಂತಿ ಚಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಯಾರದೋ ಕದ ನಂಬರ್ ನಲ್ಲಿ ಕಾಂಗ್ರಸ್ ಕಚೇರಿ ಕಟ್ಟಡ ನಿರ್ಮಿಸಲಾಗಿದೆ.ಅದು ಕೂಡ ನಿಯಮಬದ್ದವಾಗಿಲ್ಲ ಎಂದು ವಿಪಕ್ಷ ಸದಸ್ಯರ ಆರೋಪ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಅಗಲೇ ಈ ಬಗ್ಗೆ ಮಾತನಾಡದವರು ಈಗ್ಯಾಕೆ ಬಂತು ಕೇವಲ ರಾಜಕೀಯ ಉದ್ದೇಶದಿಂದ ಈಗ ಪ್ರಸ್ತಾಪಿಸಲಾಗುತ್ತಿದೆ ಎಂದು ಅಧ್ಯಕ್ಷ ರಾಮಕ್ರೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಸದಾಶಿವ ಬಂಗೇರ, ಶರೀಫ್ ತಿರುಗೇಟು ನೀಡಿದರು. ರಾಜಕೀಯ ಉದ್ದೇಶವಿದ್ದರೆ ಅಗಲೇ ಅಕ್ಷೇಪಿಸುತ್ತಿದ್ದೆವು, ಅಜೆಂಡಾದಲ್ಲಿ ಉಲ್ಲೇಖಿಸಿದರಿಂದ ಚರ್ಚೆ ನಡೆಸಿದ್ದೆವೆ ಎಂದು ಬಿಜೆಪಿ ಸದಸ್ಯರು ಉತ್ತರಿಸಿದರು.
ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರಾ, ಸದಸ್ಯರಾದ ಪ್ರವೀಣ್ ಬಿ, ಗಂಗಾಧರ್, ವಾಸು ಪೂಜಾರಿ, ಇಕ್ಬಾಲ್ ಗೂಡಿನಬಳಿ, ಜಗದೀಶ್ ಕುಂದರ್, ಲೋಕೇಶ್ ಸುವರ್ಣ, ಪ್ರವೀಣ್ ಕಿಣಿ, ಸಿದ್ಧೀಕ್ ಬೋಳಂಗಡಿ ಚರ್ಚೆಯಲ್ಲಿ ಪಾಲ್ಗೊಂಡರು.
Be the first to comment on "ಲೇಔಟ್ ವಿವಾದ, ಬಿಜೆಪಿ ಸದಸ್ಯರ ಸಭಾತ್ಯಾಗ"