ಕಲ್ಲಡ್ಕವು ದಕ್ಷಿಣ ಭಾರತದ ಅಯೋಧ್ಯೆಯಂತೆ, ಡಾ. ಪ್ರಭಾಕರ ಭಟ್ ರಾಮನ ಭಕ್ತನಾಗಿ ಹನುಮಂತ ತನ್ನನ್ನು ಸಮರ್ಪಿಸಿಕೊಂಡಂತೆ ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡಿದ್ದಾರೆ.
ಹೀಗಂದವರು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ.ಕಲ್ಲಡ್ಕದಲ್ಲಿ ಸೋಮವಾರ ಹನುಮಾನ್ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಬಳಿಕ ಧ್ಯಾನ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಿ ಸುರೇಶ ಶೆಟ್ಟಿ ಗುರ್ಮೆ ಮುಖ್ಯ ಅತಿಥಿಯಾಗಿ ಮಾತನಾಡಿ ಡಾ| ಪ್ರಭಾಕರ ಹಿಂದೂ ಸಮಾಜಕ್ಕೆ ನೇತಾರನಾಗಿ ಸರ್ವಸ್ವ ತ್ಯಾಗ ಮಾಡಿದ್ದಾರೆ. ಸಮಾಜಕ್ಕೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅವರ ತ್ಯಾಗಕ್ಕೆ ಬೆಲೆ ಬರುವಂತೆ ಶ್ರೀರಾಮ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು. ಬಿಜೆಪಿ ನೇತಾರ ರಾಜೇಶ್ ನಾಕ್ ಉಳಿಪಾಡಿಗುತ್ತು ಮಾತನಾಡಿ ಡಾ| ಭಟ್ ಅನೇಕ ಅಪವಾದ, ಆರೋಪಗಳನ್ನು ಎದುರಿಸಿಯೂ ಸಮಾಜಕ್ಕೆ ಶಕ್ತಿಯಾಗಿ ದುಡಿಯುತ್ತಿದ್ದಾರೆ ಎಂದರು.
ಕಲ್ಲಡ್ಕ ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಶ್ರೀರಾಮ ರಾಕ್ಷಸಿ ಪ್ರವೃತ್ತಿಯ ಸಂಹಾರಕ, ದೇಶದ ಕಾರ್ಯ ಎಂದರೆ ರಾಮಕಾರ್ಯ, ಇಂದಿನ ಸರಕಾರ ರಾಕ್ಷಸಿ ಪ್ರವೃತ್ತಿಗೆ ಪ್ರೋತ್ಸಾಹ ನೀಡದಿರಲಿ. ಧರ್ಮ ಸಾಮ್ರಾಜ್ಯ ಸ್ಥಾಪನೆಯಾಗಲಿ, ಮತೀಯ ಮನೋಭಾವ ತೊಲಗಿ ರಾಮ ಮನೋಭಾವ ಬೆಳೆಯಲಿ ಎಂದರು. ಭಯೋತ್ಪಾದನೆಯ ನಿರ್ಣಾಮ ಮಾಡಲು ಶ್ರೀರಾಮನ ಜನ್ಮ ಆಗಿದೆ. ಇಲ್ಲಿ ದಿನಂಪ್ರತಿ ಪೂಜೆ ಸೇವೆ ಇಲ್ಲ. ಯಾರು ಬೇಕಾದರೂ ನಿತ್ಯ ದರ್ಶನ ಮಾಡಿ ಶ್ರೀರಾಮ, ಆಂಜನೇಯನ ಸ್ಪೂರ್ತಿಯನ್ನು ಪಡೆಯಬಹುದು. ಕಲ್ಲಡ್ಕದಲ್ಲಿ ಭಿನ್ನ ಸಮಾಜದ ಇಬ್ಬರು ವ್ಯಕ್ತಿಗಳಿಂದ ಆಗಿರುವ ಘರ್ಷಣೆಗೆ ಕೋಮು ಬಣ್ಣ ಹಚ್ಚುವುದು ಬೇಡ. ಇಲ್ಲಿನ ಹಿಂದು ಮುಸಲ್ಮಾನರಲ್ಲಿ ಬಿನ್ನಾಭಿಪ್ರಾಯವಿಲ್ಲ. ರಾಜಕೀಯ ಪ್ರವೇಶದಿಂದ ಇದಕ್ಕೆ ಪ್ರೇರಣೆ ದೊರೆಯುತ್ತಿದೆ ಎಂದರು. ಹನುಮಾನ್ ವಿಗ್ರಹ ನಿರ್ಮಾಣದ ಶಿಲ್ಪಿ ತ್ಯಾಗರಾಜ್‌ರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿ.ಪಂ. ಮಾಜಿ ಸದಸ್ಯ ಚೆನ್ನಪ್ಪ ಆರ್. ಕೋಟ್ಯಾನ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ದಕ್ಷಿಣ ಭಾರತದ ಅಯೋಧ್ಯೆ ಕಲ್ಲಡ್ಕ: ವಜ್ರದೇಹಿ ಸ್ವಾಮೀಜಿ"