ವಿಶೇಷ ಸೃಷ್ಟಿಗಳ ಲೋಕದಲ್ಲಿ – ಅಂಕಣ 2: ಗೊಂದಲ ರಾಜ್ಯದ ಪ್ರಜೆ

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ  ಪ.ಗೋ ಅವರ ಪುತ್ರ ಸಾಹಿತ್ಯಪ್ರೇಮಿ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ).

ವಿಶೇಷ ಸೃಷ್ಟಿಗಳ ಲೋಕದಲ್ಲಿ ದ್ವಿತೀಯ ಕಂತು ಇಲ್ಲಿದೆ…

ಗೊಂದಲ ರಾಜ್ಯದ ಪ್ರಜೆ

ಗೊಂದಲ ರಾಜ್ಯದ ಪ್ರಜೆಯಾದ ಕಾರಣ, ಎಷ್ಟೋ ಬಾರಿ ಸಾಮಾನ್ಯವೆನಿಸಿದ ಪದಗಳೂ ಮರೆತು ಹೋಗುವ ಹಾಗಾಗುತ್ತಿತ್ತು.

ಒಂದು ಸಂದರ್ಭದಲ್ಲಿ ಕಾಶ್ಮೀರಕ್ಕೆ ವಿಶ್ವಸಂಸ್ಥೆಯ Observer ಆಗಿಮಹನೀಯನ ನೇಮಕವಾಯಿತು. ಆ ಪದದ ಕನ್ನಡ ಅರ್ಥವೂ ಮರೆತು ಹೋಗಿ ಒದ್ದಾಡಿದೆ. ‘ಮ್ಯಾಟರ್ಕೊಡಿ ಸಾರ್’ ಎಂದು ಪೀಡಿಸುತ್ತಿದ್ದ ಕಂಪಾಸಿಟರ್ ಮಹಾಶಯನಿಗೆ, ನಡುವೆ ಒಂದಷ್ಟು ಖಾಲಿ ಸ್ಥಳ ಬಿಟ್ಟು ಕಂಪೋಸ್ ಮಾಡುವಂತೆ ವಾರ್ತೆಯ ತುಣುಕನ್ನು ಬರೆದು ಕೊಟ್ಟು ಊಟ ಮಾಡಿಬರುತ್ತೇನೆ ಎಂದು ಹೇಳಿ ಹತ್ತಿರದ ‘ಪ್ಲೇಟ್’ ಹೋಟೇಲಿಗೆ ಓಡಿದೆ.

ಅಲ್ಲಿ ಊಟ ಸಿಗುವ ಮೊದಲೇ ಕ್ಯಾಷಿಯರ್ ಬಳಿಯಿಂದ ಹಿಂದಿನ ದಿನದ ನವಭಾರತವನ್ನು ಕಸಿದುಕೊಂಡು, ವಿಶ್ವಸಂಸ್ಥೆಯ ಸುದ್ದಿ ಹುಡುಕಿ, ಅಲ್ಲಿ ಕಂಡಿದ್ದ ‘ನಿರೀಕ್ಷಕ’ ಶಬ್ದವನ್ನೇ ಉರು ಹೊಡೆದುಕೊಂಡು ( ಊಟಮುಗಿಸಿ) ಬಂದ ಕೂಡಲೇ, ಖಾಲಿ ಬಿಟ್ಟಿದ್ದ ಸ್ಥಳವನ್ನು ತುಂಬಿದೆ.

ನೆಮ್ಮದಿಯಾಗಿತ್ತೆ?

“ಹೌದು – ಒಂದರ್ಧ ಗಂಟೆಯ ಹೊತ್ತು. ಮುಖ್ಯ ಉಪಸಂಪಾದಕ ಹಿ.ಮ.ನಾಗಯ್ಯ ಮುದ್ರಣಗೊಂಡಿದ್ದ ಅಂದಿನ ಪತ್ರಿಕೆಯಲ್ಲಿ ‘ವಿಶ್ವಸಂಸ್ಥೆಯ ನಿರೀಕ್ಷಕ’ ಶಬ್ದವನ್ನುನೋಡಿ, ಸುದ್ದಿ ಬರೆದು ಕೊಟ್ಟ ಹೊಸ ಪಶುವನ್ನು ತರಾಟೆಗೆ ತೆಗೆದುಕೊಳ್ಳುವವರೆಗೂ.

“ನೀವು ದ.ಕ.ದವರು ಖದೀಮರು ಕಣ್ರೀ. ನಿಮ್ಮದು ಗ್ರಾಂಥಿಕ ಕನ್ನಡ. ಆದ್ರಿಂದ ನೀವು ಹೇಳಿದ್ದು ಸರೀನೇ ಆಗಿರಬೇಕಲ್ಲ?” ಎಂಬ ವ್ಯಂಗ್ಯ ನುಡಿ ಮಾತ್ರವೇ ಅವರಿಂದ ಬಂತಲ್ಲದೆ,ತಪ್ಪಾಗಿದ್ದ ಶಬ್ದವನ್ನುತಿದ್ದಿದ, ಸರಿಯಾದ ಶಬ್ದಬರಲಿಲ್ಲ.

ವೆಂಕಣ್ಣ ಬರುವ ಸಮಯ ಕಾದು, ಅವರಲ್ಲೇ ಸರಿಯಾದ ಶಬ್ದದ ಬಗ್ಗೆ ಕೇಳದೆ ವಿಧಿಯಿರಲಿಲ್ಲ. “ಏನುಬರೆದಿದ್ದೀಯೋ?” ವೆಂಕಣ್ಣನ ಪ್ರಶ್ನೆ. ನಾಗಯ್ಯನವರು ಹಿಡಿದುಕೊಂಡಿದ್ದ ಪತ್ರಿಕೆಯತ್ತ ಕೈತೋರಿದೆ. ‘ನಿರೀಕ್ಷಕ’ 36 ಫಾಂಟ್ ನಲ್ಲಿ ಮೆರೆಯುತ್ತಿದ್ದ.

‘ಬಕ್ಕ ಪಣ್ಪೆ’ ಎಂದ ವೆಂಕಣ್ಣ.  ನಾಗಯ್ಯನವರು ಹೋದ ಮೇಲೆ observerಗೆ ವೀಕ್ಷಕ ಎಂಬ ಪದವೇ ಸೂಕ್ತವಾದುದು ಎಂದು ವಿವರಿಸಿದರು. ಬೇರೆ ಪತ್ರಿಕೆಗಳಲ್ಲೂ ಅದೇ ಶಬ್ದದ ಪ್ರಯೋಗವಾಗಿದ್ದುದನ್ನು ತೋರಿಸಿದರು.

ಪರಾಂಬರಿಕೆ – ಪರಿಶೀಲನೆಗಳ ಪಾಠದ  ‘ರಿವಿಶನ್’  ಕೂಡಾ ಆಗೊಮ್ಮೆ ಆಯಿತು.

ಕೊನೆಯಲ್ಲಿ,  ಕಚೇರಿಯ ಮೂಲೆಯ ನೆಲದಲ್ಲಿ ಧೂಳು ಹಿಡಿದುಕೊಂಡು ಬಿದ್ದಿದ್ದ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್  – ಕನ್ನಡ ಅರ್ಥಕೋಶದ ದರ್ಶನವಾದಾಗ“  ಅಲ್ಲೊಂದು ತಲೆದಿಂಬಿದೆ, ಅದನ್ನು ಎತ್ತಿ ಧೂಳು ಜಾಡಿಸಿ ನೋಡು. ಕೆಲವು ಶಬ್ದಗಳು ಸಿಕ್ಕಿದರೂ ಸಿಕ್ಕಬಹುದು” ಎಂದರು ಸ.ಸಂ.ಕು. ವೆಂ.

ಅವರು ಹೇಳಿದಂತೆ ಮಾಡಲು ಹೊರಟಾಗ – ರಾತ್ರೆ ಅದನ್ನು ತಲೆಯಡಿಗೆ ಇಟ್ಟು ನಿದ್ದೆ ಮಾಡಿದರೆ, ಕೆಲವಾದರೂ ಶಬ್ದಗಳು ತಲೆಯೆ ಒಳಗೆ ಬರುತ್ತವೆ. ಅವು ಅಲ್ಲೇ ಉಳಿಯುತ್ತವೆ ಎಂಬ ಉಪದೇಶ ವಿನೋದವೂ ಆಯಿತು.

(ತಲೆದಿಂಬಾಗಿಯೂ ಅದನ್ನುಉಪಯೋಗಿಸಬಹುದಿತ್ತು – ಅದು ಸುಸ್ಥಿತಿಯಲ್ಲಿ ಇದ್ದಿದ್ದರೆ. ರಕ್ಷಾಕವಚ ಕಾಣೆಯಾಗಿತ್ತು. ಕೆಲವು ಪುಟಗಳೂ ಮಾಯವಾಗಿದ್ದವು –ಇಂದಿಗೂ ಹಲವು ಪತ್ರಿಕಾಲಯಗಳಲ್ಲಿ ಹಾಗೇ ಇವೆಯಲ್ಲ!)

ಅನುಭವಗಳ ಸಂದಿಗ್ಧದಳ ಜೊತೆಯಲ್ಲೇ, ಸ್ವಾರಸ್ಯಗಳ ಆನಂದದ ಅನುಭವಗಳೂ ಆಗುತ್ತಿದ್ದವು. ನಾನೇ ಬರೆದಿದ್ದ 17 ಪಂಕ್ತಿಗಳ ಸುದ್ದಿ ಮುದ್ರಣವಾಗಿದ್ದ ಪತ್ರಿಕೆಯ ಪ್ರತಿಯನ್ನು ನನ್ನ ವಸತಿಗೆ ಒಯ್ದು, ಹಗಲಿನಲ್ಲಿನಾಲ್ಕು, ರಾತ್ರಿಯಲ್ಲಿ ಎಂಟು ಬಾರಿ ಓದಿ, ನುಸುಳಿದ್ದ ಒಂದೇ ಒಂದು ಮುದ್ರಣ ದೋಷವನ್ನು ಗುರುತು ಹಾಕಿದ್ದಾಗ ಆದ ಸಂತೋಷ.

ಹಾಗೆಯೇ ನಾನೂ ಬರೆದಿದ್ದ ಯಾವುದೋ ಒಂದು ಸ್ಥಳೀಯ ಸುದ್ದಿಯ ಬಗ್ಗೆ, ಇತರ ಇಬ್ಬರು ಓದುಗರು ಹೋಟಿಲಿನಲ್ಲಿ ಮಾಡಿದ ಪ್ರಸ್ತಾಪ ಕೇಳಿಸಿದಾಗ, ಸುದ್ದಿಯನ್ನು ‘ಸಂಪಾದಿಸಿ’ದ ಕಾರಣ ಮೂಡಿದ ಸ್ವಯಂಘನತೆ.

ಮಾರಾಟದ ಸ್ಟಾಲ್ನಲ್ಲಿ ಪತ್ರಿಕೆ ಪಡೆದ ಓದುಗರ ದೃಷ್ಟಿ ನಾನು ಬರೆದಿದ್ದ ವಾರ್ತೆಗಳ ಕಡೆಗೆ ಹಾದು ಅಲ್ಲೇ ನಿಂತಾಗ ಉಂಟಾದ ಕುತಾಹಲಾಸಕ್ತ ಪ್ರತಿಕ್ರಿಯೆ-

-ಇವುಗಳೆಲ್ಲಾ ಸಂತೋಷದ ಅನುಭವಗಳು.

ವಾರಗಳು ಉರುಳಿದವು.

ಆರಂಭದ ಏಳುಬೀಳುಗಳ ಒಟ್ಟಿಗೆ ಬಳೇಪೇಟೆಯ ಪತ್ರಿಕಾ ಪ್ರಪಂಚದ ಗಣ್ಯರು-ಘನಪಾಠಿಗಳ ಪರಿಚಯವೂ ಆಗತೊಡಗಿತು.

ಹೊಸದಾಗಿ (ವ್ಯಕ್ತಿತ್ವ) ಪರಿಚಯ ಮಾಡಿಕೊಳ್ಳಬೇಕಾಗಿ ಬಂದ ಇಬ್ಬರು:

ಪತ್ರಿಕೆಯ ಸಂಪಾದಕ ಆನಂದರೇಣು (ಅವರು ಅಧಿಕೃತವಾಗಿ ಆರ್.ಆನಂದರಾವ್ ಎಂಬ ಹೆಸರು ಉಪಯೋಗಿಸುತ್ತಿದ್ದರು) ಮತ್ತು ಮುದ್ರಕ- ಪ್ರಕಾಶಕ(ಮತ್ತು ವಾಸ್ತವದಲ್ಲಿ ಮಾಲಿಕ ಕೂಡಾ) ಮುರುಘೇಂದ್ರದೇವ್, ಇವರು.

ಇಬ್ಬರ ವ್ಯಕ್ತಿತ್ವವೂ ಒಂದೊಂದೂ ರೀತಿಯಲ್ಲಿ ‘ಟಿಪಿಕಲ್’ ಆಗಿತ್ತು ಎಂದೆನಿಸಿತು- ನನ್ನ ಮಟ್ಟಿಗೆ.

ಪತ್ರಿಕೆಯ ಕಾರ್ಯಾಲಯಕ್ಕೆ ‘ಬಿಡುವಿನಲ್ಲೇ’ ಬಂದು, ಅಂದಿನ (ಇತರ) ಪತ್ರಿಕೆಗಳ ಮೇಲೆ ಕಣ್ಣಾಡಿಸಿ, ಕೆಲವು ದೂರವಾಣಿ ಕರೆಗಳನ್ನುಮಾಡಿದ ನಂತರ, ಸಂಪಾದಕೀಯವನ್ನು ಬರೆದು ಹೊರಟುಹೋಗುತ್ತಿದ್ದ ಆನಂದರೇಣು ಅವರ ‘ನೇರ’ ಪರಿಚಯದ ಅವಕಾಶಕ್ಕೆ ಒಂದೆರಡು ತಿಂಗಳುಗಳ ಕಾಲ ಕಾಯಬೇಕಾಯಿತು!

ಆದರೆ, ಇತರರ ಮೂಲಕ- ಅವರು ಸ್ಥಿತಿವಂತ ಕುಟುಂಬದಿಂದ ಬಂದವರು. ಜೆ.ಬಿ.ಮಲ್ಲಾರಾಧ್ಯ (ಆಗ ಮೈಸೂರು ಮಹಾರಾಜರ ಆಪ್ತ ಕಾರ್ಯದರ್ಶಿ)ರ ಅಳಿಯ, ಸ್ವಯಂ ಒಳ್ಳೆಯ ರೇಖಾ ಚಿತ್ರಕಲಾವಿದ, ಬರಹಗಾರ ಇತ್ಯಾದಿ ವಿವರಗಳು ದೊರಕಿದ್ದವು.

ಮುದ್ರಕ ಮುರುಘೇಂದ್ರರ ಹಿನ್ನೆಲೆ- ಜಾಣ್ಮೆ- ವ್ಯವಹಾರ ಚಾತುರ್ಯಗಳ ಬಗ್ಗೆ ತಿಳಿದುಕೊಂಡುದು ಬಹಳಷ್ಟು (ಫ್ರೀಸರ್ವೀಸ್ ಘಟನೆ ಅವರದೇ) ಅವುಗಳಿಗೆ ಬಲಿಯಾದುದು ಮತ್ತಷ್ಟು, ಅನುಭವಿಸಿದುದು ಇನ್ನಷ್ಟು.

ಅವೆಲ್ಲವುಗಳ ವಿವರ – ನಿರೂಪಣೆ ಮುಂದೆ ಬರಲಿದೆ. ಬರಲೇಬೇಕಾಗುತ್ತದೆ.

ಸಂಪಾದಕೀಯ ವಿಭಾಗದಲ್ಲಿದ್ದ ಇನ್ನಿಬ್ಬರು ಕುಮಾರ ವೆಂಕಣ್ಣ ಮತ್ತು ಹಿ.ಮ.ನಾಗಯ್ಯ, ನನ್ನಂತೆ ಆಗಬಂದು ಈಗ ಹೋಗುವ ಪತ್ರಿಕಾ ಯಜ್ಞ ಪಶುಗಳು ಹಲವಾರು ಮಂದಿ.

ಅವರನ್ನು ಬಿಟ್ಟರೆ ಪ್ರಸರಣಾ ವಿಭಾಗದ ಟಿ.ಸಿ.ಬಸವರಾಜ್ ಮತ್ತು ಜಾಹೀರಾತು ‘ಪ್ರಬಂಧಕ’ ರಾಜಾಸಿಂಗ್ (ಪ್ರಸಿದ್ಧಪತ್ರಿಕೋದ್ಯಮಿ ಎಂ.ಬಿ.ಸಿಂಗ್ ಅವರ ಮಾವ).

ಇತರ ವಿಭಾಗಗಳ ಕೆಲವಾರು ಮಂದಿ ನನ್ನ ಮಟ್ಟಿಗೆ ಗಣ್ಯರೇ ಆದರೂ, ಈ ಸಂದರ್ಭದಲ್ಲಿ ಅವರ ಪ್ರಸ್ತಾಪ ಪ್ರಸ್ತುತವಾಗಲಾರದು.

ವ್ಯಕ್ತಿಗಳ ಮತ್ತು ಅವರ ಸ್ವಭಾವಗಳ ಪರಿಚಯದ ಜೊತೆಗೇ ನಾನು ಅನಿವಾರ್ಯವಾಗಿ ಪ್ರವೇಶಿಸಿದ್ದ ವೃತ್ತಿಯ ಪರಿಚಯವೂ ಆಗತೊಡಗಿತು.  ಬರಿಯ ಊರು ಸುತ್ತಿ ಸಿಕ್ಕಿದ ಉದ್ಯೋಗ ಮಾಡಿ ಪಡೆದುಕೊಂಡಿದ್ದ  “ಲೋಕಶಿಕ್ಷಣ”ದ(ಮತ್ತು ಹನ್ನೊಂದನೆ ವರ್ಷ ಪ್ರಾಯದವರೆಗಿನ ಪ್ರಾಥಮಿಕ ಶಿಕ್ಷಣ) ಹೊರತು ಬೇರಾವ ಹಿನ್ನೆಲೆಯೂ ಇಲ್ಲದ ನನಗೆ ಆಡಿದ್ದೇ ಭಾಷೆ, ಬರೆದದ್ದೇ ಬರಹ ಎಂದಾಗಿತ್ತು. ಆದರೆ ಅಲ್ಲಿ ನೋಡಿ, ಇಲ್ಲಿ ಕೇಳಿ, ಮತ್ತೊಂದೆಡೆ ಓದಿ ಸಿಕ್ಕಿದ ಎಲ್ಲವನ್ನೂ ತಲೆಯೊಳಗೆ ತುಂಬಿಸಿಕೊಳ್ಳುವುದೂ – ಸಮಯ ಬಂದಾಗ ತುಂಬಿದ್ದನ್ನೆಲ್ಲಾ ಮಾತಿನಲ್ಲೊ ಬರಹದಲ್ಲೊ ಹೊರಚೆಲ್ಲುವುದೂ ಅಭ್ಯಾಸವಾಗಿತ್ತು.

ಅದೇ ಅಭ್ಯಾಸವು ಮೂಡಿಸಿದ್ದ ಧೈರ್ಯದಲ್ಲಿ ಕೆಲವು ಕಥೆಗಳನ್ನೂ ಬರೆದಿದ್ದೆ. ‘ಬೆಳ್ಳಿಯ ಸೆರಗು’ ಎಂಬ ಒಂದು (ಆ) ಸಾಮಾಜಿಕ ಕಾದಂಬರಿಯನ್ನೂ ಕೊರೆದಿದ್ದೆ. ಅವುಗಳಲ್ಲಿನ ಭಾಷೆ, ಶೈಲಿ, ಶಬ್ದ ಪ್ರಯೋಗಗಳು ಈಗಿನ ಪಂಡಿತ – ವಿಮರ್ಶಕರ ಗಮನಕ್ಕೆ(ಆಗ) ಬಂದಿದ್ದರೆ ಏನೇನೋ ಆಗಿ ಹೋಗುತ್ತಿತ್ತು! (ಸದ್ಯಕ್ಕೆ ಅವು ಯಾವವೂ ಲಭ್ಯವಿಲ್ಲವಾದ್ದರಿಂದ ನಿಶ್ಚಿಂತೆಯಾಗಿರಬಹುದು).

ಆದರೆ, ನನ್ನಲ್ಲಿದ್ದ ಬಂಡವಾಳ ಏನೇನೂ ಸಾಲದು ಎಂಬ ಅರಿವು ಮೂಡಿದ ಕೂಡಲೆ, ಶಬ್ದಗಳ ಸಂಗ್ರಹದ ಕಡೆಗೆ ವಿಶೇಷ ಗಮನ ಕೊಡಬೇಕಾಯಿತು. ಹಲವು ಮಹನೀಯರ ಸ್ಫೂರ್ತಿ- ಸಹಕಾರ- ಸಹಾಯಗಳಿಂದ ಸಂಗ್ರಹವೂ ಆಗ ತೊಡಗಿತು. ಕಿಟ್ಟೆಲ್ ನಿಘಂಟಿನ ‘ದನಗಾಹಿ’ ಗೋವಿಂದ ಪೈಗಳ ‘ಹರದ’, ಪ್ರಜಾವಾಣಿಯ ಇ.ಆರ್.ಸೇತೂರಾಂ ಅವರ ‘ನೆನೆಗುದಿ’ –  ‘ಪ್ರಮಾಣೀಕರಣ’ಗಳ ನೆನಪು ಉಳಿದುದು ಹಾಗೆ.

ಕೆಲವ ಬಲ್ಲಿದರಿಂದ ಕಲ್ತು ಮತ್ತೆ ಕೆಲವ ಒಲ್ಲದವರಿಂದಲೂ ಸೆಳೆದು ಸಂಗ್ರಹಿಸುತ್ತಿದ್ದ ಮಾಹಿತಿಯನ್ನು ಉಪಯೋಗಿಸಲು ಕಲಿಯುತ್ತಿದ್ದ ಹಾಗೇ, ವೃತ್ತಿಯ ಕರಾಳ ದರ್ಶನದ ಛಾಯೆಯೂ ಗೋಚರಿಸತೊಡಗಿತು. ವಾಸ್ತವ ಪರಿಸ್ಥಿತಿಗೂ ಆಸೆ-ಆದರ್ಶಗಳಿಗೂ ಇರುವ ವ್ಯತ್ಯಾಸವೂ ಅರಿವಾಗತೊಡಗಿತು.

(ಮುಂದಿನ ಭಾಗದಲ್ಲಿ)

last week:

https://bantwalnews.com/2017/05/04/pa-go-series-no1/

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ – ಅಂಕಣ 2: ಗೊಂದಲ ರಾಜ್ಯದ ಪ್ರಜೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*