ರಾಮನ ಆದರ್ಶ ಅನುಷ್ಠಾನ ಮಾಡುವ ರಾಷ್ಟ್ರ ಭಾರತ, ರಾಮ ಸೇವೆ ಎಂದರೆ ರಾಷ್ಟ್ರಸೇವೆ ಎಂಬ ಚಿಂತನೆ ಹನುಮಂತನಿಗಿತ್ತು. ಹನುಮಂತನಂತೆ ನಾವು ಎಷ್ಟು ತಯಾರಾಗುತ್ತೇವೆ ಎಂಬ ಕುರಿತು ಚಿಂತನೆ ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಶ್ರೀಮದ್ರಾಮಾಯಣ ಮಹಾಯಜ್ಞ ಹಾಗೂ ಹನುಮೋತ್ಸವ ಸಂದರ್ಭ ಮಂಗಳವಾರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಭ್ರಷ್ಟಾಚಾರ ಮುಕ್ತ ಭಾರತ ಇಂದು ಅಗತ್ಯ. ಭವಿಷ್ಯದ ಭ್ರಷ್ಟಾಚಾರಮುಕ್ತ ಭಾರತಕ್ಕೆ ಪ್ರಧಾನಿ ಮೋದಿ ಭವ್ಯ ತಳಹದಿಯನ್ನು ಹಾಕಿದ್ದಾರೆ. ಸರಳವಾದ ನವಭಾರತದ ಉನ್ನತಿಗೆ ಬೇಕಾದ ದೂರದೃಷ್ಟಿಯುಳ್ಳವರು ಪ್ರಧಾನಿ ಎಂದರು.
ಸಹಿಷ್ಣುತೆ ಭಾರತದ ಅಂತರಂಗ:
ಭಾರತದ ಅಂತರಂಗ ಸಹಿಷ್ಣುತೆ ಎಂದ ಹೇಳಿದ ಸ್ವಾಮೀಜಿ, ರಾಮಾಯಣ ಮತ್ತು ಮಹಾಭಾರತ ಸಹಿಷ್ಣುತೆಯನ್ನು ಕಲಿಸುತ್ತದೆ. ಬದುಕು ಉತ್ತಮವಾಗಬೇಕು ಎಂದಾದರೆ ಆತ್ಮನಿಷ್ಠ ಸಂಸ್ಕೃತಿ ಬೆಳೆಯಬೇಕು ಎಂದರು.
ರಾಮಾಯಣ ಎಂಬ ಮಹಾಕಾವ್ಯವನ್ನು ಓದಿದರೆ ಬದುಕು ತಿದ್ದಲು ಬೇರೆ ಕನ್ನಡಿ ಬೇಡ. ಹನುಮಂತನ ಉಪಾಸನೆ ಮಾಡಿದರೆ ಉತ್ತಮ ಸಾಧನೆಗೆ ದಾರಿಯಾಗುತ್ತದೆ. ಹನುಮ ಎಂದೊಡನೆ ಮನಸ್ಸು ರಾಮನ ಬಳಿ ಓಡುತ್ತದೆ. ರಾಮ ಎಂಬ ಎರಡಕ್ಷರದಲ್ಲಿ ಆಕಾಶತತ್ವ, ಅಗ್ನಿತತ್ವ ವಾಯುತತ್ವ ನೋಡಲು ಸಾಧ್ಯ . ಹನುಮಂತ ಕ್ರಿಯಾಶೀಲತೆಗೆ ಇನ್ನೊಂದು ಹೆಸರು. ಹಳ್ಳಿಹಳ್ಳಿಗಳಲ್ಲಿ ಹನುಮನಿರುವ ಎಂದರು.
ವಿಶೇಷ ಆಹ್ವಾನಿತರಾಗಿ ಕುಡ್ಪಲ್ತಡ್ಕ ಶ್ರೀ ಭಾರತಿ ಸೇವಾ ಸಮಿತಿ ಗೌರವಾಧ್ಯಕ್ಷ ಬಿ.ಕೃಷ್ಣ ಭಟ್, ಮುಂಬೈ ವಿಶ್ವಾತ್ ಕೆಮಿಕಲ್ಸ್ ಅಧ್ಯಕ್ಷ ಬಿ.ವಿವೇಕ ಶೆಟ್ಟಿ, ಪುತ್ತೂರು ಬಿಲ್ಲವ ಸಂಘ ಅಧ್ಯಕ್ಷ ಜಯಂತ ನಡುಬೈಲು, ಮಂಗಳೂರು ಚಾರ್ಟರ್ಡ ಅಕೌಂಟೆಂಟ್ ರಾಮಮೋಹನ ರೈ, ಮಣಿಪಾಲ ಶಾಂಭವಿ ಬಿಲ್ಡರ್ಸ್ ನ ದಿನೇಶ್ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.
ಸಪ್ತಾಹ ಅಖಂಡ ಭಗವನ್ನಾಮ ಸಂಕೀರ್ತನೆ, ಪ್ರಸಾದ ವಿತರಣೆ ಬೆಳಗ್ಗೆ ನಡೆದರೆ, ಬಳಿಕ ಶ್ರೀ ಗಣಪತಿ ಹವನ, ಶ್ರೀ ಮದ್ರಾಮಾಯಣ ಮಹಾಯಜ್ಞ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭ ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಚಯ ದರ್ಪಣ ಎಂಬ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರದ ಮರುವಿನ್ಯಾಸಗೊಳಿಸಿದ ವೆಬ್ ಸೈಟ್ ಲೋಕಾರ್ಪಣೆಗೊಂಡಿತು.
ಒಡಿಯೂರು ಶ್ರೀಗ್ರಾಮವಿಕಾಸ ಯೋಜನೆ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಮೇಲ್ವಿಚಾರಕ ಸದಾಶಿವ ಅಳಿಕೆ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಹನುಮಂತನಂತೆ ರಾಷ್ಟ್ರಸೇವೆಗೆ ತಯಾರಾಗಿ: ಒಡಿಯೂರು ಶ್ರೀ ಸಲಹೆ"