ಬಂಟ್ವಾಳ ಪುರಸಭೆಯಲ್ಲಿ ವಾಸಿಸುವ ಎಲ್ಲ ಪರಿಶಿಷ್ಟ ಜಾತಿ, ಪಂಗಡದವರಿಗೆ ಆರ್.ಸಿ.ಸಿ. ಮನೆ ನಿರ್ಮಿಸಿ, ಹಂಚುರಹಿತ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಿ.
ಸರಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಬಿಡುಗಡೆಯಾಗಿರುವ ವಿಶೇಷ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸುವ ಕುರಿತು ಬುಧವಾರ ಬಂಟ್ವಾಳ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಳಿಬಂದ ಮಾತು.
ವಿಷಯ ಪ್ರಸ್ತಾಪಿಸಿದ ಸುರೇಶ್ ಅರ್ಬಿ, ಪುರಸಭೆಗೆ ಪರಿಶಿಷ್ಟ ಜಾತಿ, ಪಂಗಡದವರ ಏಳಿಗೆಗೆ ಕಾರ್ಯ ಮಾಡುವ ಇಚ್ಛಾಶಕ್ತಿ ಇದ್ದರೆ ಎಲ್ಲರಿಗೂ ಆರ್.ಸಿ.ಸಿ. ಮನೆ ನಿರ್ಮಿಸುವ ಕುರಿತು ಮುಂದಡಿ ಇಡಬೇಕು ಎಂದು ಸಲಹೆ ನೀಡಿದರು.
ಸಭೆಯ ಕುರಿತು ಎಲ್ಲರಿಗೂ ಮಾಹಿತಿ ನೀಡಲಿಲ್ಲ ಎಂದು ಆರಂಭದಲ್ಲೇ ತಕರಾರು ಕೇಳಿಬಂತು. ಮಂಡಾಡಿಯಲ್ಲಿ ಗಲೀಜು ನೀರು ರಸ್ತೆಗೆ ಬಿಡಲಾಗುತ್ತಿದ್ದು, ಈ ಕುರಿತು ಸ್ಥಳೀಯ ಸದಸ್ಯರಿಗೆ ಮನವಿ ಸಲ್ಲಿಸಿದರೂ ಯಾವ ಉಪಯೋಗವಾಗಲಿಲ್ಲ ಎಂಬ ದೂರು ಕೇಳಿಬಂತು.
ಹಣ ಯಾತಕ್ಕೆ
ಪರಿಶಿಷ್ಟ ಜಾತಿ, ಪಂಗಡದ ಜನರಿಗೆಂದು ಮೀಸಲಾದ ಹಣ ಯಾರಿಗೆ, ಭವನ ನಿರ್ಮಾಣಕ್ಕಾ ಅಥವಾ ಕುಟುಂಬಗಳ ಏಳಿಗೆಗಾ ಎಂದು ಪ್ರತಿಮಾ ಪ್ರಶ್ನಿಸಿದರು. ಸ್ವ ಉದ್ಯೋಗಕ್ಕೆ ಅನುದಾನ ನೀಡಿ ಎಂದು ಅವರು ಒತ್ತಾಯಿಸಿದರು.
ಪುರಸಭೆ ಅಕಾರಿಗಳು ಹಾಗೂ ಸದಸ್ಯರು ಇಚ್ಛಾಶಕ್ತಿಯಿಂದ ಕೆಲಸ ಮಾಡಿ, ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಿದರೆ ಅಭಿವೃದ್ಧಿ ಸಾಧ್ಯ ಎಂದು ಗಂಗಾಧರ್ ಹೇಳಿದರು.
ಈ ಸಂದರ್ಭ ಬಿ.ಸಿ.ರೋಡ್ ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಹಲವೆಡೆ ನಡೆಯುವ ಕಾಮಗಾರಿಗಳಿಂದಾಗಿ ಧೂಳು ಏಳುತ್ತಿರುವುದನ್ನು ಗಂಗಾಧರ್ ಸಹಿತ ಹಲವರು ಪ್ರಸ್ತಾಪಿಸಿದರು.
ಪುರಸಭಾ ಸದಸ್ಯ ವಾಸು ಪೂಜಾರಿ ಮಾತನಾಡಿ, ಪುರಸಭೆಯ ಹಲವು ಪ.ಜಾತಿ, ಪಂಗಡದವರಿಗೆ ಹಕ್ಕುಪತ್ರ ಇಲ್ಲ. ಇದರಿಂದ ಅವರು ಮೂಲಸೌಕರ್ಯವಂಚಿತರಾಗುತ್ತಾರೆ. ಹಾಗಾಗಬಾರದು, ಈ ಕುರಿತು ಶೀಘ್ರ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಅಕಾರಿ ಮತ್ತಡಿ ಉತ್ತರಿಸಿ, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸೇರಿದ ೨೨೫ ಮನೆಗಳಿವೆ. ಇವುಗಳಲ್ಲಿ ವಾಸಿಸುವವರಿಗೆ ಅಗತ್ಯ ಸೌಕರ್ಯ ಒದಗಿಸಲು ಅನುದಾದ ಸದ್ಬಳಕೆ ಮಾಡಲಾಗುವುದು ಹಾಗೂ ಸ್ವೋದ್ಯೋಗ ಕುರಿತು ಮಾರ್ಗದರ್ಶನ ನೀಡಲಾಗುವುದು. ೨ ಕೋಟಿ ರೂ. ಅನುದಾನದಲ್ಲಿ ಗ್ರಂಥಾಲಯ, ಪಾಣೆಮಂಗಳೂರಿನ ಗುಡ್ಡೆಯಂಗಡಿ ಮತ್ತು ಶಾಂತಿಗುಡ್ಡೆಗಳಲ್ಲಿ ಸಮುದಾಯ ಭವನ ನಿರ್ಮಾಣ, ಎಸ್.ಸಿ, ಎಸ್.ಟಿ. ಮನೆಗಳಿಗೆ ಸೋಲಾರ್ ಲೈಟ್ ಅಳವಡಿಕೆ, ಚಂಡ್ತಿಮಾರ್ ಬಾವಿ ದುರಸ್ತಿ, ಮೈರಾನ್ ಪಾದೆ ಬಾವಿ ದುರಸ್ತಿಗೆ ಅನುದಾನ ಮೀಸಲಿಡುವಂತೆ ಒತ್ತಾಯ ಕೇಳಿಬಂದಿದ್ದು, ಅದರ ಕುರಿತು ಗಮನ ಹರಿಸಲಾಗುವುದು ಎಂದರು.
ಅಧ್ಯಕ್ಷ ರಾಮಕೃಷ್ಣ ಆಳ್ವ ಮಾತನಾಡಿ, ಅನುದಾನವನ್ನು ಸಮರ್ಪಕವಾಗಿ ಹಂಚಲು ಈ ಸಭೆ ಕರೆಯಲಾಗಿದ್ದು, ವಿವಿಧ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಖಂಡರಾದ ಗಂಗಾಧರ, ವಿಶ್ವನಾಥ ಚಂಡ್ತಿಮಾರ್, ಸುರೇಶ ಅರ್ಬಿ ವಿಷಯ ಮಂಡಿಸಿದರು. ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಪ್ರವೀಣ್, ಜಗದೀಶ ಕುಂದರ್, ವಸಂತಿ ಚಂದಪ್ಪ, ಯಾಸ್ಮೀನ್, ಪ್ರಭಾ ಸಾಲ್ಯಾನ್, ಜೆಸಿಂತಾ, ಬಿ.ಮೋಹನ, ಮುಖ್ಯಾಕಾರಿ ಎಂ.ಎಚ್. ಸುಧಾಕರ್, ಮತ್ತಡಿ ಉಪಸ್ಥಿತರಿದ್ದರು.
Be the first to comment on "ಪ.ಜಾತಿ, ಪಂಗಡದವರಿಗೆ ಆರ್.ಸಿ.ಸಿ, ಮನೆ ನಿರ್ಮಿಸಿ"