ಮೌನೇಶ ವಿಶ್ವಕರ್ಮ
ಅಂಕಣ: ಮಕ್ಕಳ ಮಾತು
ಮಕ್ಕಳು ತಮ್ಮ ಬಾಲ್ಯವನ್ನು ಖಷಿಯಲ್ಲಿ ಅನುಭವಿಸುವ ಶಿಕ್ಷಣ ಪದ್ದತಿ ಬೇಕು. ಮಕ್ಕಳನ್ನು ಆಟಕ್ಕೂ ಬಿಡದೆ, ಬರಿಯ ಪಾಠಮಾತ್ರವೇ ಮುಖ್ಯವಾದರೆ ಮಕ್ಕಳು ಮಕ್ಕಳಾಗಿರುವುದಿಲ್ಲ. ಮಕ್ಕಳು ಮಕ್ಕಳಾಗಿರಬೇಕಾದರೆ ಆಟವೂ -ಪಾಠವೂ ಅವರ ಜೊತೆಜೊತೆಗೆ ಬೇಕು. ಮಕ್ಕಳು ಖುಷಿಯಾಗಿದ್ದಾಗಲಷ್ಟೇ ಮಕ್ಕಳಾಟಿಕೆಗೆ ಅರ್ಥ ಬರುತ್ತದೆ.
ಜೂನ್‌ನಲ್ಲಿ ಒಂದನೇ ತರಗತಿಗೆ ಸೇರಿದ್ದ ಆ ಪುಟಾಣಿ ಹುಡುಗ, ಆಗಸ್ಟ್ ತಿಂಗಳಿನಲ್ಲಿ ಆ ಒಂದುದಿನ ಯಾಕೋ ಡಲ್ ಆದಂತಿದ್ದ. ಅವನಮ್ಮ ವಿಚಾರಿಸಿದಾಗ ಅವನು ಹೇಳಿದ್ದು ಹೀಗೆ
ಶಾಲೆಯಲ್ಲಿ ಆಟ ಆಡ್ಲಿಕ್ಕೆ ಬಿಡುದಿಲ್ಲ, ದೊಡ್ಡ ಕ್ಲಾಸ್‌ನವರೆಲ್ಲಾ ಆಟ ಆಡ್ತಾರೆ, ನಮ್ಗೆ ಯಾಕೆ ಆಡ್ಲಿಕ್ಕೆ ಬಿಡುದಿಲ್ಲಾ..? ಅಂತ. ಅವನಮ್ಮನಿಗೆ ಅದೇ ದೊಡ್ಡ ಚಿಂತೆಯಾಯಿತು. ಹೋಂ ವಕ್ ಮಾಡಲು ಕೂರಿಸಿದಾಗಲೂ ಅವನ ಆಟಕ್ಕೆ ಬಿಡದ ಕೊರಗು ಪುನಾರವರ್ತನೆಯಾಗುತ್ತಿತ್ತು. ಅದೊಂದು ದಿನ ನಾನು ಆ ಹುಡುಗನ ಮನೆಗೆ ಹೋದಾಗ ಅವನಮ್ಮ ನನ್ನಲ್ಲಿ ಬಾಲಕನ ಸಮಸ್ಯೆಯನ್ನು ಮುಂದಿಟ್ಟರು, ಆ ಪುಟಾಣಿ ಹುಡುಗನೂ ಅಲ್ಲೇ ಇದ್ದ, ನಾನು ಅವನನ್ನು ಹತ್ತಿರ ಕರೆದು ಕೇಳಿದೆ. ಇದು ಹೌದಾ..?, ಅವನು ಅಳುವುದೊಂದೇ ಬಾಕಿ, ನಾವು ಹೋಂವರ್ಕ್ ಎಲ್ಲಾ ಸರಿ ಮಾಡ್ತೇನೆ, ಆದ್ರೂ ನಮ್ಮ ಕ್ಲಾಸ್‌ನವರನ್ನ ಆಟಕ್ಕೆ ಬಿಡ್ತಾ ಇಲ್ಲ ಎಂದ. ಆಗ ಅವನಮ್ಮ ತನ್ನ ಮಗನಲ್ಲಿ ಹೇಳಿದರು ಮಾಮ ಶಾಲೆಗೆ ಫೋನ್ ಮಾಡ್ತಾರೆ ಅಂತ, ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡ ಪುಟಾಣಿ.
ನಂತರ ಆ ಹುಡುಗನ ಅಮ್ಮ ಶಾಲೆಗೆ ಪದೇ ಪದೇ ಪೋನ್ ಮಾಡಿ ಆಟಕ್ಕೆ ಬಿಡಿ ಎಂದು ಒತ್ತಾಯ ಮಾಡಿದರು. ಶಾಲೆಯ ಆಡಳಿತ ಮಂಡಳಿಯಲ್ಲೂ ಈ ಬಗೆಯ ಚರ್ಚೆಗಳು ನಡೆದಿತ್ತು. ಕೊನೆಗೆ ಶಾಲೆಯಲ್ಲಿ ಮಕ್ಕಳ ಆಟಕ್ಕೆ ಅವಕಾಶ ಕಲ್ಪಿಸುವುದರೊಂದಿಗೆ ಸಮಸ್ಯೆ ಮುಕ್ತಾಯವಾಯಿತು. ಆದರೆ ಆ ನಾಲ್ಕೈದು ತಿಂಗಳು ಮಗನ ಮಾನಸಿಕ ಖಿನ್ನತೆಯಿಂದ ಆ ಅಮ್ಮ ಪಟ್ಟ ಮಾನಸಿಕ ವೇದನೆ ಮಾತ್ರ ಅಷ್ಟಿಷ್ಟಲ್ಲ.
ಮಕ್ಕಳು ಎಂದರೆ ಆಟ. ಆಟವೆಂದರೆ ಮಕ್ಕಳು. ಈ ನಡುವೆ ಮಕ್ಕಳಿಗೆ ನೀಡುವ ಶಿಕ್ಷಣ ಮಕ್ಕಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವಂತಿರಬೇಕೇ ವಿನ: ಮಕ್ಕಳನ್ನು ಖಿನ್ನರನ್ನಾಗಿಸಬಾರದು. ಮೇಲೆ ಹೇಳಿದ ಘಟನೆಯಲ್ಲಿ ಆ ಹುಡುಗ ಶಿಕ್ಷಣದ ಹೆಸರಿನಲ್ಲಿ ಪಡೆದದ್ದು ಖಿನ್ನತೆಯನ್ನು ಮಾತ್ರ. ಶಾಲೆಯಲ್ಲಿ ಪಾಠ ಎಷ್ಟು ಮುಖ್ಯವೋ, ಜೊತೆಗೆ ಆಟವೂ ಅಷ್ಟೇ ಮುಖ್ಯವಾಗಬೇಕು. ಪಾಠ ಮಕ್ಕಳ ಮನಸ್ಸನ್ನು ಅರಳಿಸಿದರೆ, ಜೊತೆಗೆ ಸಿಗುವ ಆಟ ಮಕ್ಕಳನ್ನು ಆ ಪ್ರಕ್ರಿಯೆಗೆ ಸಜ್ಜುಗೊಳಿಸುತ್ತದೆ. ಹಾಗಾಗಿ ಆಟ ಬೇಕೇ ಬೇಕು.
ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಕಳೆಯುವುದು ಶಾಲೆಯಲ್ಲಿ ಆದರೆ, ಈ ಅವಧಿಯಲ್ಲಿ ಅವರ ಯೋಚನೆಗಳಿಗೆ, ಸದಾಶಯಗಳಿಗೆ ಬಣ್ಣ ಕೊಡುವ ಚಟುವಟಿಕೆಗಳು ನಡೆಯಬೇಕೇ ವಿನಃ, ಅವರಲ್ಲಿ ಮಾನಸಿಕ ಖಿನ್ನತೆಯನ್ನು ಹುಟ್ಟಿಸಬಾರದು. ಮಕ್ಕಳ ಮಾನಸಿಕ ಸಂವೇಗಗಳ ಬಗ್ಗೆ ಅಧ್ಯಯನ ನಡೆಸಿದ ಫ್ರೊ.ನಟರಾಜ್ ರವರು ತಮ್ಮ ಪುಸ್ತಕದಲ್ಲಿ ಮಕ್ಕಳ ಬಗ್ಗೆ ಬರೆಯುವಾಗ ಹೀಗೆ ಹೇಳುತ್ತಾರೆ ತಮಗೆ ಇಷ್ಟವಾದುದನ್ನು ಕಳೆದುಕೊಂಡಾಗ ಮಕ್ಕಳಿಗೆ ಮಾನಸಿಕ ಖಿನ್ನತೆ ಕಾಣಿಸುತ್ತದೆ, ಇದರ ಫಲವಾಗಿ ಮಕ್ಕಳು ಮೌನಿಗಳಾಗಿ ಕೂತಲ್ಲೇ ಕೂತು, ಎಲ್ಲೋ ನೋಡುತ್ತಾರೆ, ಅವರಿಗೆ ಬಾಹ್ಯದ ಪರಿವೇ ಇರುವುದಿಲ್ಲ, ಊಟ ಉಪಚಾರಗಳು, ಸ್ನೇಹಿತರು ಕೂಡ ಬೇಡವೆನ್ನಿಸುತ್ತದೆ, ಇದರಿಂದ ಖಿನ್ನತೆ, ನಿರ್ಭಾವ, ನಿರಾಸಕ್ತಿ, ನಿದ್ರಾಹೀನತೆ, ಅಳು ಇತ್ಯಾದಿ ಅಸಾಮಾನ್ಯ ವರ್ತನೆಗಳು ಕಾಣಿಸಿಕೊಳ್ಳುತ್ತದೆಎಂದು.
ಮಕ್ಕಳಲ್ಲಿ ಇರಬೇಕಾದ ಮಕ್ಕಳಾಟಿಕೆ ಅವರಿಂದ ದೂರವಾದಾಗ ಮಕ್ಕಳು iಕ್ಕಳ ಹಾಗೆ ಕಾಣುವುದಿಲ್ಲ. ಈಗಾಗಲೇ ವಿವಿಧ ಕಾರಣಗಳಿಂದ ಮಕ್ಕಳು ಬೇಗ ದೊಡ್ಡವರಾಗುತ್ತಿದ್ದಾರೆ. ಅದರರ್ಥ ದೈಹಿಕವಾಗಿ ಅಲ್ಲ. ಮಾನಸಿಕವಾಗಿ , ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ಸಿಗಬೇಕಾದ ಪ್ರೇರಣೆಗಳು ಸಿಗುತ್ತಿಲ್ಲ ಬದಲಾಗಿ ದೊಡ್ಡವರಿಗೆ ಏನು ಬೇಕೋ ಅದು ಮಕ್ಕಳಿಗೆ ಸಿಗುತ್ತಿದೆ. ಇದರಲ್ಲಿ ದೊಡ್ಡವರ ಸ್ವಾರ್ಥವೂ ಅಡಗಿದೆ ಎಂದರೆ ತಪ್ಪಾಗಲಾರದು.
ನಮ್ಮ ಸುತ್ತಮುತ್ತ ಇಂತಹಾ ಘಟನಾವಳಿಗಳೇ ಹೆಚ್ಚಾಗುತ್ತಿರುವಾಗ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ನಲಿಕಲಿ ತರಗತಿಗಳು ನಮ್ಮಲ್ಲಿ ಹೊಸ ಆಶಾಕಿರಣಗಳನ್ನು ಮೂಡಿಸುತ್ತದೆ, ಈ ನಲಿಕಲಿ ಮಕ್ಕಳಲ್ಲಿ ಉಂಟುಮಾಡುವ ಖುಷಿ, ಲವಲವಿಕೆಯ ಬಗ್ಗೆ ತಿಳಿಯಬೇಕಾದರೆ ಶಾಲೆಯಂಗಳದತ್ತ ನಾವು ಹೆಜ್ಜೆಹಾಕಬೇಕು. ಆ ಶಾಲೆಯಲ್ಲಿ ಚಿಕ್ಕವಯಸ್ಸಿನವರಾಗಿದ್ದು, ಚುರುಕುತನದಿಂದ ಇದ್ದಾರೆ ಎಂದಾಗಿದ್ದರೆ, ಅವರಿಗೆ ನಲಿಕಲಿ ಶಿಕ್ಷಣ ಪರಿಣಾಮಕಾರಿಯಾಗಿ ಸಿಗುತ್ತಿದೆ ಎಂದರ್ಥ. ಅಲ್ಲಿ ಪಾಠವನ್ನೂ ಆಟದ ಮೂಲಕ ಮಾಡುತ್ತಾರೆ, ಮಕ್ಕಳು ದಿನವಿಡೀ ಕಲಿಯುತ್ತಿರುತ್ತಾರೆ ಮತ್ತು ಅವರ ಕಲಿಕಾ ವಿಧಾನವೇ ವಿಭಿನ್ನವಾಗಿರುತ್ತದೆ. ಆದರೂ ಬಾಲ್ಯವನ್ನೂ ಅನುಭವಿಸುವ ಒಳ್ಳೆಯ ಅವಕಾಶವನ್ನು ನಲಿಕಲಿ ಶಿಕ್ಷಣ ಪದ್ಧತಿ ಒದಗಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು.
ನಲಿಕಲಿ ಶಿಕ್ಷಣ ಪದ್ದತಿ ಇನ್ನೂ ಕಾಲಿಡದ ಕೆಲಶಾಲೆಗಳು ಹಾಗೂ ಸರ್ಕಾರಿ ಶಾಲೆಗಳ ಒಂದನೇ-ಎರಡನೇ ತರಗತಿ ಮಕ್ಕಳ ಉತ್ಸಾಹ-ಹುಮ್ಮಸ್ಸುಗಳನ್ನು ಒಮ್ಮೆ ಪರೀಕ್ಷಿಸಿ ನೋಡಿ. ಹೆಚ್ಚು ಖುಷಿಯಲ್ಲಿರುವ ಮಕ್ಕಳು ಯಾರೆಂಬುದು ಅರಿವಾಗುತ್ತದೆ.
ಒಟ್ಟಿನಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಖಷಿಯಲ್ಲಿ ಅನುಭವಿಸುವ ಶಿಕ್ಷಣ ಪದ್ದತಿ ಬೇಕು. ಮಕ್ಕಳನ್ನು ಆಟಕ್ಕೂ ಬಿಡದೆ, ಬರಿಯ ಪಾಠಮಾತ್ರವೇ ಮುಖ್ಯವಾದರೆ ಮಕ್ಕಳು ಮಕ್ಕಳಾಗಿರುವುದಿಲ್ಲ. ಮಕ್ಕಳು ಮಕ್ಕಳಾಗಿರಬೇಕಾದರೆ ಆಟವೂ -ಪಾಠವೂ ಅವರ ಜೊತೆಜೊತೆಗೆ ಬೇಕು. ಮಕ್ಕಳು ಖುಷಿಯಾಗಿದ್ದಾಗಲಷ್ಟೇ ಮಕ್ಕಳಾಟಿಕೆಗೆ ಅರ್ಥ ಬರುತ್ತದೆ, ಇದು ಇಲ್ಲದಾಗ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ವಿದ್ಯಮಾನಗಳು ನಡೆದಂತಾಗುತ್ತದೆ. ಶಾಲೆಯ ಶಿಸ್ತು-ಗುರುಗಳ ಗತ್ತು ಮಕ್ಕಳ ಘನತೆಗೆ ತರದಿರಿ ಕುತ್ತು ಎಂಬ ಘೋಷಣೆಗಳೂ ಹುಟ್ಟಿಕೊಳ್ಳುತ್ತದೆ. ದಯವಿಟ್ಟು ಹೀಗಾಗುವುದು ಬೇಡ, ಮಕ್ಕಳು ಸದಾ ಖುಷಿಯಲ್ಲಿರಲಿ..
Be the first to comment on "ಶಾಲೆಯಲ್ಲಿ ಆಟ ಆಡ್ಲಿಕ್ಕೆ ಬಿಡುದಿಲ್ಲ..!"