ಅಭಿವೃದ್ಧಿ ಪೂರ್ತಿಯಾಗಲು ವರ್ಷಗಳೇ ಹಿಡಿಯಲಿ, ಆದರೆ ಅಷ್ಟರವರೆಗೆ ಜನರ ಸುರಕ್ಷತೆಗೆ ಏನಾದರೂ ತಾತ್ಕಾಲಿಕ ಉಪಾಯ ಮಾಡಬೇಕಲ್ವಾ? ಜನವರಿಯಲ್ಲಿ ಮೇಲ್ಕಾರ್ ಜಂಕ್ಷನ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದು ಹಸಿರಾಗೇ ಇದೆ.
- ಹರೀಶ ಮಾಂಬಾಡಿ
www.bantwalnews.com COVER STORY
ಇದು ವೀಡಿಯೋ ಗೇಮ್ ಅಲ್ಲ, ಡ್ರೈವಿಂಗ್ ಅನುಭವ.
ಪಾಣೆಮಂಗಳೂರಿನಿಂದ ಕಲ್ಲಡ್ಕ ಕಡೆಗೋ ಅಥವಾ ಕೊಣಾಜೆಗೋ ಹೋಗುತ್ತೀರಿ ಅಂದುಕೊಳ್ಳಿ. ಮೊದಲು ನೇರವಾಗಿ ಪಾಣೆಮಂಗಳೂರು ದಾಟಿ ಹೆದ್ದಾರಿ ಸಿಗಬೇಕಾದರೆ, ಎಡ ಭಾಗದಲ್ಲಿ ಯಾವ ವಾಹನ ಬರುತ್ತಿದೆ ಎಂದು ನೋಡಲೇಬೇಕು. ಸರಿ, ನೋಡಿ ರಸ್ತೆ ದಾಟಿದಾಗ ಬಿಳಿ ಬಿಳಿ ಪಟ್ಟಿಯ ಸುಂದರವಾದ, ಅಷ್ಟೇ ಅಗಲವಾದ ರಸ್ತೆ ಕಾಣಸಿಗುತ್ತದೆ. ಅದು ಮೇಲ್ಕಾರು. ರಸ್ತೆ ನೋಡಿದೊಡನೆ ನೀವು ಸ್ಪೀಡ್ ಹೆಚ್ಚಳ ಮಾಡುತ್ತೀರಿ. ಹಾಗೇ ಸ್ಪೀಡಿನಲ್ಲಿ ಹೋಗುವಾಗ ಎದುರಿನಿಂದ ಅಷ್ಟೇ ಸ್ಪೀಡಿನಲ್ಲಿ ವಾಹನ ಬರುತ್ತದೆ. ಅದೇನು ನಿಮ್ಮ ವಾಹನಕ್ಕೆ ಗುದ್ದಿಯೇಬಿಡುತ್ತದೆ ಎನ್ನುವಾಗ ನೀವು ಲೆಫ್ಟಿಗೆ ತಿರುಗಿಸುತ್ತೀರಿ, ಅರೇ, ಲೆಫ್ಟಿನಲ್ಲೂ ಅಷ್ಟೊಂದು ಜಾಗವಿದೆಯಾ ಎಂದು ಬೇಸ್ತುಬೀಳುತ್ತೀರಿ.
ಛೇ…ಲೆಫ್ಟಿನಲ್ಲೇ ಹೋಗಬೇಕಿತ್ತು ಎಂದು ಹಲುಬುತ್ತಾ ಮುಂದೆ ಸಾಗಿದರೆ ರೋಡ್ ಅಂತ್ಯ… ಮತ್ತೆ ರೈಟಿಗೆ ತಿರುಗಿ ರಸ್ತೆ ಸೇರಬೇಕು.
ಇಂಥದ್ದೊಂದು ವಿಚಿತ್ರ ಸನ್ನಿವೇಶ ಎದುರಾದರೆ, ನೀವು ಮೇಲ್ಕಾರ್ ನಲ್ಲಿದ್ದೀರಿ ಎಂದರ್ಥ.
ಈ ಸ್ಪೀಡ್, ಲೆಫ್ಟ್, ರೈಟ್ ಕಲ್ಲಡ್ಕ ಕಡೆಗೆ ಹೋಗುವ ವಾಹನದವರಿಗಾದರೆ, ಕೊಣಾಜೆಗೆ ಸಂಚರಿಸುವವರಿಗೆ ಬೇರೊಂದು ಅನುಭವ.
ವಾಹನವನ್ನು ಯಾವ ಪಾಯಿಂಟ್ ನಲ್ಲಿ ತಿರುಗಿಸುವುದು ಎಂದೇ ಗೊತ್ತಾಗದಂಥ ಸ್ಥಿತಿ.
ಬಂಟ್ವಾಳನ್ಯೂಸ್ ಆರಂಭವಾದಾಗ ಪ್ರಕಟಗೊಂಡ ಪ್ರಥಮ ಕವರ್ ಸ್ಟೋರಿ ಮೇಲ್ಕಾರ್ ಬಗ್ಗೆಯೇ ಇತ್ತು. ಅದಾದ ಬಳಿಕ ವಿವಿಧ ಪತ್ರಿಕೆಗಳಲ್ಲೂ ಮೇಲ್ಕಾರ್ ಭಾರಿ ಅಭಿವೃದ್ಧಿಯಾಗುತ್ತಿದೆ ಎಂದೇ ಪ್ರಕಟಗೊಂಡವು. ಏನಾಯಿತೋ, ಈಗ ಅಭಿವೃದ್ಧಿಯೇನೋ ಆಗುತ್ತಿದೆ. ಆದರೆ ಕಳೆದ ಜನವರಿಯಲ್ಲಿ ಎರಡು ಜೀವಗಳು ರಸ್ತೆ ಅಪಘಾತಕ್ಕೆ ಬಲಿಯಾಗಿವೆ.
ಆಗಾಗ್ಗ ಅಪಘಾತಗಳು ಆಗುತ್ತಿವೆ. ಯಾವುದು ಆಗಬಾರದು ಅಂದುಕೊಂಡಿದ್ದೆವೋ ಅದೇ ಆಗುತ್ತಿದೆ ಎಂಬುದು ವಿಷಾದ.
ಸದ್ಯಕ್ಕೀಗ ಮೇಲ್ಕಾರ್ “ಭಯಂಕರ’ವೇ ಆಗಿದೆ. ಭಯಂ ಅಂದರೆ ಭಯ, ಕರ ಅಂದರೆ ಮಾಡೋದು. ಭಯಂಕರ ಅಂದರೆ ಭಯ ಹುಟ್ಟಿಸವುದು ಎಂದರ್ಥ. ಮೇಲ್ಕಾರ್ ಭಯ ಹುಟ್ಟಿಸುತ್ತಿದೆಯಾ?
ಅನುಭವಿಸಿದರವನ್ನೇ ಕೇಳಿ.
ಯಾವಾಗ ರಸ್ತೆ ಅಗಲವಾಯ್ತೋ ಅಡ್ಡಾದಿಡ್ಡಿ ಪಾರ್ಕಿಂಗ್ ಶುರುವಾಯ್ತು. ಯಾವುದೂ ಏಕಕಾಲದಲ್ಲಿ ಆಗಲಿಲ್ಲ. ಜನಸಾಮಾನ್ಯರಿಗೆ ಬೇಕಾಗಿದ್ದು ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ. ಅದು ದೊರಕಲೇ ಇಲ್ಲ. ಬಿಳೀ ಪಟ್ಟಿಯನ್ನೂ ಹೋಂ ಗಾರ್ಡ್ ಗಳನ್ನೂ ಶರವೇಗದಲ್ಲಿ ಸಾಗುವ ವಾಹನ ಸವಾರರು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ಮೇಲ್ಕಾರ್ ಎಂಬುದು ರೇಸ್ ಟ್ರ್ಯಾಕ್ ಆಗಿದೆಯೇನೋ ಎಂದು ಅನಿಸಲು ಶುರುವಾಗಿದೆ.
ಇದೀಗ ಪಾಣೆಮಂಗಳೂರಿನಿಂದ ಹೆದ್ದಾರಿ ಸೇರುವ ಜಾಗದ ಬಳಿಯಿಂದ ಪೆಟ್ರೋಲ್ ಬಂಕ್ ಬಳಿವರೆಗೆ ರಸ್ತೆ ಚತುಷ್ಪಥಗೊಂಡಿದೆ. ಆದರೆ ಇಡೀ ರಸ್ತೆಯಲ್ಲಿ ಡಿವೈಡರ್ ಇಲ್ಲ. ಹೀಗಾಗಿ ವಾಹನ ಸವಾರರು ದಿಢೀರ್ ಆಗಿ ಗೊಂದಲಕ್ಕೊಳಗಾಗುತ್ತಾರೆ.
ಇದೇ ವೇಳೆ ಕೊಣಾಜೆಗೆ ತಿರುಗುವವರು ಎದುರಿನಿಂದ ಬರುವ ವಾಹನಗಳನ್ನ ತಪ್ಪಿಸಲು ಹರಸಾಹಸಪಡುತ್ತಾರೆ. ಅದೇ ಹೊತ್ತಿನಲ್ಲಿ ರಸ್ತೆಯಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿಕೊಂಡಿರುತ್ತವೆ. ಇದರ ಪಕ್ಕದಲ್ಲೇ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸುತ್ತವೆ. ಒಟ್ಟಾರೆಯಾಗಿ ದ್ವಿಚಕ್ರರಾದಿಯಾಗಿ ವಾಹನ ಸವಾರರಿಗೆ ಮೇಲ್ಕಾರ್ ಎಂಬುದೊಂದು ಡೇಂಜರ್ ಸ್ಪಾಟ್
ಮಂಗಳೂರಿನಿಂದ ಬಸ್ಸಿನಲ್ಲಿ ಮೇಲ್ಕಾರ್ ನಲ್ಲಿ ಇಳಿದು, ಕೊಣಾಜೆಗೆ ಹೋಗುವ ಬಸ್ಸು ಹತ್ತಬೇಕು ಎಂದಿಟ್ಟುಕೊಳ್ಳಿ. ಹೇಗೆ ಹೋಗುವುದು? ಎಲ್ಲೆಡೆಯೂ ವೇಗವಾಗಿ ಚಲಿಸುವ ವಾಹನಗಳು.
ಬೇಕೇಬೇಕು
ಮೇಲ್ಕಾರ್ ನ ಭಾಗದಲ್ಲಿ ಸಂಚರಿಸುವ ವಾಹನಗಳ ವೇಗ ನಿಯಂತ್ರಿಸಲು ಸೂಚನಾ ಫಲಕ, ಬ್ಯಾರಿಕೇಡ್ ಗಳನ್ನು ಅಳವಡಿಸುವುದು ತುರ್ತು ಅಗತ್ಯ. ಹೆದ್ದಾರಿಯೂ ಆಗಿರುವ ಕಾರಣ ಇಲ್ಲಿ ಅನಿಯಂತ್ರಿತವಾಗಿ ಟ್ಯಾಂಕರ್, ಟಿಪ್ಪರ್ ಗಳು ಸಾಗುತ್ತವೆ. ಹೀಗಾಗಿ ತುರ್ತಾಗಿ ಬೇಕೇ ಬೇಕಾದದ್ದು ಬ್ಯಾರಿಕೇಡ್ ಹಾಗೂ ವಾಹನ ವೇಗಕ್ಕೆ ತಡೆ ಜೊತೆಗೆ ಒಂದಷ್ಟು ಟ್ರಾಫಿಕ್ ನಿಯಮ ಪಾಲನೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ದಾಟಲು ಸುರಕ್ಷಿತ ವ್ಯವಸ್ಥೆ.
Be the first to comment on "ಮೇಲ್ಕಾರಿನ ಓವರ್ ಸ್ಪೀಡ್ ಗೆ ಕಂಟ್ರೋಲ್ ಇಲ್ವೇ?"