ಮಾಮ… ನನ್ನ ಬ್ರೆಷ್ಷಿಗೆ ಉಪ್ಪು ಹಾಕಿ…!

ಹಸುಗೂಸಿನಿಂದ ಹಿಡಿದು ನಾಲ್ಕುವರ್ಷದವರೆಗಿನ ಮಕ್ಕಳಿಗೆ ಟಿ.ವಿ ಯನ್ನೇ ಸ್ನೇಹಿತ ಎಂದು ನಾವು ನಂಬಿಸುತ್ತೇವೆ. ಹಾಗಾಗಿ ಟಿ.ವಿ. ಜಾಹೀರಾತುಗಳೇ  ಮಕ್ಕಳಿಗೆ ಸಮಾಧಾನ ನೀಡುವ ಲಾಲಿ ಹಾಡುಗಳಾಗುತ್ತಿದೆ. ಇದು ಈ ಜಾಹೀರಾತು ವ್ಯಾಮೋಹಕ್ಕೆ ದೊಡ್ಡ ಕಾರಣ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ.

www.bantwalnews.com

  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಕಳೆದ ಏಳೆಂಟು ವರ್ಷಗಳ  ಹಿಂದಿನ ಈ ಘಟನೆ ನಡೆದದ್ದು ನನ್ನ ಮನೆಯಲ್ಲಿಯೇ. ಬೆಳಿಗ್ಗೆ ಎದ್ದು ಹಲ್ಲುಜ್ಜುವ ಸಮಯ. ಎರಡೂವರೆ ವರ್ಷ ಪ್ರಾಯದ ನನ್ನ ಅಳಿಯ ಯಶುವನ್ನೂ  ನನ್ನ ಜೊತೆ ಕರೆದೊಯ್ದೆ, ಅವನ ಪುಟ್ಟದಾದ ಬ್ರೆಷ್‌ಗೆ ಪೇಸ್ಟ್ ಹಾಕಿ ಕೊಟ್ಟೆ. ಆಗ ಅವನು ತೊದಲು ಮಾತಿನಲ್ಲಿ ಮಾಮ.. ಇದಕ್ಕೆ  ಉಪ್ಪು ಹಾಕಿಎ॒ಂದು ಅವನ ಬ್ರೆಷ್ ಅನ್ನು ನನಗೆ ತೋರಿಸಿದ. ನನಗೆ ಅಚ್ಚರಿಯಾಯಿತು. ಕಾರಣ ಕೇಳಿದಾಗ ಅವನು ಹೇಳಿದ.. ಇದರಲ್ಲಿ ಉಪ್ಪು ಇಲ್ಲಲ್ಲಾ..? ಅವನ  ಈ ಬಗೆಯ ಮಾತಿಗೆ ಕಾರಣ ಹುಡುಕತೊಡಗಿದಾಗ  ಸಿಕ್ಕ ವಿವರವಿದು.

ಟಿ.ವಿ.ಯಲ್ಲಿ ಬರುತ್ತಿದ್ದ ಜಾಹಿರಾತು ಅವನಲ್ಲಿ ಆ ಪ್ರಶ್ನೆ ಮೂಡಿಸಿತ್ತು ಎಂಬುದನ್ನು ತಿಳಿಯಲು ನನಗೆ ಮತ್ತೊಂದು ದಿನ ಬೇಕಾಯ್ತು. ಟೂತ್‌ಪೇಸ್ಟ್‌ನ ಜಾಹೀರಾತೊಂದರಲ್ಲಿ  ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪು ಇದೆಯೇ?॒ ಎಂದು ಪ್ರಶ್ನೆ ಹಾಕುವ ರೂಪದರ್ಶಿಯ ಪ್ರಶ್ನೆ ಪುಟ್ಟ ಯಶುವಿನ ಮನದಲ್ಲಿ ಪ್ರಶ್ನೆಯ ಬೀಜಹಾಕಿತ್ತು. ನಂತರ ಜಾಹೀರಾತನ್ನು ಗಮನವಿಟ್ಟು ವೀಕ್ಷಿಸಿದ ನಾನು ನನ್ನಲ್ಲಿ ಯಶು ಮೂಡಿಸಿದ್ದ ಪ್ರಶ್ನೆಗೆ ಉತ್ತರ ಹುಡುಕಿದೆ.

ಮಕ್ಕಳು ಟಿ.ವಿ.ಜಾಹೀರಾತಿಗೆ ಬೇಗ ಮರುಳಾಗುತ್ತಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾಗಿಲ್ಲ. ಟಿ.ವಿಯಲ್ಲಿ ಬರುವ ಜಾಹೀರಾತುಗಳ ಪ್ರಭಾವ ಎಷ್ಟಿದೆಯೆಂದರೆ ಮಧ್ಯಾಹ್ನ ತಿಂದ ಬಿಸ್ಕೆಟ್ ಮಗುವಿಗೆ ರಾತ್ರಿ ರುಚಿಯಾಗದು. ಯಾಕೆಂದರೆ ಸಂಜೆ ಇನ್ಯಾವುದೋ ಜಾಹೀರಾತು ಆ ಮಗುವಿನ ಕಣ್ಮನ ಸೆಳೆದಿರುತ್ತದೆ. ಅದನ್ನು ಆ ಮಗು ಹಠದ ಮೂಲಕ ವ್ಯಕ್ತಪಡಿಸುತ್ತಲೇ ಇರುತ್ತದೆ. ಆದರೆ ದೊಡ್ಡವರು ಇದನ್ನು ಅರ್ಥಮಾಡಿಕೊಳ್ಳುವ ಬಗೆಯೇ ಬೇರೆಯದು.

ಯಾರದೇ ಮನೆಯ ಹಸುಗೂಸನ್ನೇ ನೋಡಿ.. ಅವರ ಮನೆಯಲ್ಲಿ ಟಿ.ವಿ.ಇದೆ ಎಂದಾದರೆ ಜಾಹೀರಾತು ಬರುವ ವೇಳೆ ಆ ಮಗುವಿನ ಚಲನವಲನಗಳನ್ನು ಗಮನಿಸಿ. ಅದು ಯಾವುದೇ ಜಾಹೀರಾತಾಗಿರಲಿ. ಒಂದು ಕ್ಷಣ ಜಾಹೀರಾತಿನ ಶಬ್ದದಿಂದಲೇ ನಮ್ಮ ಕಂದಮ್ಮಗಳು ಹೊಸಲೋಕದತ್ತ ಪಯಣಿಸಿರುತ್ತದೆ. ತನ್ನೆಲ್ಲಾ ಆಟವನ್ನು ಮರೆತು ಜಾಹೀರಾತಿನತ್ತ ಮುಖಮಾಡಿರುತ್ತದೆ. ಅಷ್ಟಕ್ಕೂ ಆ ಜಾಹೀರಾತು ಆ ಮಕ್ಕಳಿಗೆ ಅರ್ಥವಾಗುತ್ತದೆಯೇ ಇಲ್ಲ. ಅವರದೇ ಆದ ಚಲನವಲನ, ಕಣ್ಣುಗಳ ಪಿಳಿಪಿಳಿ, ಅಳು ಹೀಗೆ ತಮ್ಮದೇ ಶೈಲಿಯಲ್ಲಿ ಮಕ್ಕಳು ಆ ಜಾಹೀರಾತನ್ನು ಅರ್ಥಮಾಡಿಕೊಳ್ಳುತ್ತಾರೆ. ಜಾಹೀರಾತಿನ ಕೆಲಶಬ್ದಗಳು, ಜಾಹೀರಾತನ್ನು ಆಕರ್ಷಕವಾಗಿ ಸಿದ್ದಪಡಿಸಿರುವ ರೀತಿ ಒಮ್ಮೊಮ್ಮೆ ಮಕ್ಕಳನ್ನಾದಿಯಾಗಿ ಎಲ್ಲರನ್ನೂ ಪರವಶ ರನ್ನಾಗಿಸುತ್ತದೆ.

ಯಾವುದೇ ಜಾಹೀರಾತನ್ನು ಗಮನಿಸಿ, ಅದೊಂದು ಪುಟ್ಟ ಕಥೆಯಾಗಿರುತ್ತದೆ. ಕೆಲವೇ ಸೆಕೆಂಡ್‌ಗಳಲ್ಲಿ ಮಕ್ಕಳ ಮನಸ್ಸನ್ನು ಅಥವಾ ವೀಕ್ಷಕರನ್ನು ಗೆಲ್ಲುವ ಚಾಣಾಕ್ಷತೆ ಆ ಜಾಹೀರಾತಿನಲ್ಲಿ ಅಡಗಿರುತ್ತದೆ. ಮೇಲೆ ಹೇಳಿದ ಯಶುವಿನ ಪ್ರಶ್ನೆಯಲ್ಲೂ ಅಡಗಿದ್ದದ್ದು ಅವನ ಮುಗ್ಧತೆ ಮಾತ್ರ. ತಮ್ಮದೇ ಟೂತ್ ಪೇಸ್ಟ್  ಒಳ್ಳೆಯದು ಎಂದು ಸಾರಿ ಹೇಳುವ ಟೂತ್‌ಪೇಸ್ಟ್ ಕಂಪೆನಿಗೂ ಇಲ್ಲಿ ವೀಕ್ಷಕರನ್ನು ಸೆಳೆಯುವ ತಂತ್ರಗಾರಿಕೆಯೇ ಮುಖ್ಯವಾಗಿರುತ್ತದೆ. ಅದಕ್ಕಾಗಿ ಮಕ್ಕಳ ಭಾಷೆಯಲ್ಲಿಯೇ ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪಿದೆಯೇ ಎಂಬ ಪ್ರಶ್ನೆಯನ್ನೂ ಉಲ್ಲೇಖಿಸಿದ್ದರು. ಉಪ್ಪಿನ ರುಚಿ ಹಿಡಿದಿರುವ ಕೆಲಮಕ್ಕಳು ಕೂಡ ಪೇಸ್ಟ್ ತಿನ್ನುವ ಆಸೆಯಿಂದ ಉಪ್ಪಿನಂಶವಿರುವ ಪೇಸ್ಟ್ ಅನ್ನೇ ಇಷ್ಟಪಡುತ್ತಾರೆ. ಹಾಗಾಗಿ ನನ್ನ ಅಳಿಯನಿಗೂ ಇಲ್ಲಿ  ಟೂತ್‌ಪೇಸ್ಟ್ ನ ಕಂಪೆನಿಗಿಂತಲೂ ಮುಖ್ಯವಾಗಿ ಬೇಕಾದ್ದು ಉಪ್ಪು. ಅದು ಟೂತ್ ಪೇಸ್ಟ್ ನಲ್ಲಿ ಸೇರಿದೆ ಎಂಬ ಜ್ಞಾನವೂ ಅವನ ಅರಿವಿಗೆ ಬಂದಿಲ್ಲ ಹಾಗಾಗಿ ಅವನು ನನ್ನಲ್ಲಿ ಉಪ್ಪನ್ನು ಅಪೇಕ್ಷಿಸಿದ್ದಾನೆ.

ವಯಸ್ಸು, ಪರಿಸರ, ಘಟನೆಗಳು ಮಕ್ಕಳ ಮಾನಸಿಕ ಸ್ಥಿತಿಯನ್ನು ನಿರ್ಧರಿಸುತ್ತದೆ. ವಿಭಕ್ತಕುಟುಂಬಗಳೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಮನೆಗಳಲ್ಲಿ ಮಕ್ಕಳು ಹೆಚ್ಚುಹೆಚ್ಚು ಒಬ್ಬಂಟಿಗಳಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಸುಗೂಸಿನಿಂದ ಹಿಡಿದು ನಾಲ್ಕು ವರ್ಷದವರೆಗಿನ ಮಕ್ಕಳಿಗೆ ಟಿ.ವಿಯನ್ನೇ ಸ್ನೇಹಿತ ಎಂದು ನಾವು ನಂಬಿಸುತ್ತೇವೆ. ಹಾಗಾಗಿ ಮಕ್ಕಳಿಗೆ ಟಿ.ವಿ. ಜಾಹೀರಾತುಗಳೇ ಸಮಾಧಾನ ನೀಡುವ ಲಾಲಿ ಹಾಡುಗಳಾಗುತ್ತಿದೆ. ಇದು ಈ ಜಾಹಿರಾತು ವ್ಯಾಮೋಹಕ್ಕೆ ದೊಡ್ಡ ಕಾರಣ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ. ಮಕ್ಕಳು ಜಾಹೀರಾತುಗಳಿಂದ ಶಬ್ದಗಳನ್ನು , ಅದರ ಜೋಡಿಸುವಿಕೆಯನ್ನೂ, ಮಾತನ್ನೂ ಕಲಿತುಕೊಳ್ಳುತ್ತಾರೆ ಎಂಬುದು ಸತ್ಯ. ಆದರೆ ಅವೆಲ್ಲವೂ ಜಾಹೀರಾತುಗಳು ಅವರ ಮೇಲೆ ಉಂಟುಮಾಡುವ ಆಕರ್ಷಣೆಗಳು ಹಾಗೂ ಅನುಭವಗಳ ಮೇಲೆ ನಿರ್ಧರಿತವಾಗಿರುತ್ತದೆ. ಮಕ್ಕಳು ಬಾಲ್ಯದಲ್ಲಿ ವಿವಿಧ ಸನ್ನಿವೇಶಗಳಲ್ಲಿ  ಅನುಭವಿಸುವ ಖುಷಿಯ ಹಾಗೂ ನೋವಿನ ಘಟನೆಗಳು ಅವರಲ್ಲಿ ಭಯ, ಕೋಪ,ದ್ವೇಷ, ಅಸೂಯೆ, ಸುಖ, ದುಃಖ , ಅನುಕಂಪ, ಪ್ರೇಮ, ವಾತ್ಸಲ್ಯ ದಂತಹಾ ಮನೋಭಾವನೆಯನ್ನು ಮೂಡಿಸುತ್ತದೆ, ಇವೇ ಮುಂದಕ್ಕೆ ಅವರ ಬದುಕನ್ನು, ಭವಿಷ್ಯವನ್ನು ನಿರ್ದೇಶಿಸುತ್ತದೆ.

ಮುಖ್ಯವಾಗಿ ಮಕ್ಕಳು ಹೆಚ್ಚಾಗಿ ನಂಬುವ ಟಿ.ವಿ.ಯನ್ನು ನಾವು ಮಕ್ಕಳಿಗೆ ತೋರಿಸಬಾರದು ಎಂಬುದು ನನ್ನ ಅಭಿಪ್ರಾಯವಲ್ಲ. ಮಕ್ಕಳಿಗೆ ತೋರಿಸುವ ರೀತಿ ಬದಲಾಗಬೇಕು. ಮತ್ತು ಮಕ್ಕಳು ಆಡಿ-ಕುಣಿದು-ನಲಿದಾಡುವ-ಓಡಾಡುವ ಪರಿಸರವನ್ನು ಮಗುಸ್ನೇಹಿಯಾಗಿರಿಸಬೇಕಾದ್ದು ಎಲ್ಲಾ ದೊಡ್ಡವರ ಕರ್ತವ್ಯ ಎಂಬುದನ್ನು ನಾವು-ನೀವು ತಿಳಿದುಕೊಳ್ಳಬೇಕಾಗಿದೆ.

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಮಾಮ… ನನ್ನ ಬ್ರೆಷ್ಷಿಗೆ ಉಪ್ಪು ಹಾಕಿ…!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*