ಬಂಟ್ವಾಳ: ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಮಟ್ಟದ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೇಂದ್ರ ಸ್ಥಾನೀಯ ಉಪತಹಸೀಲ್ದಾರ್ ನರೇಂದ್ರನಾಥ್ ಮಿತ್ತೂರು ಮಾತನಾಡಿ, “ಯಾವುದೇ ವಿಶೇಷ ಪಾಂಡಿತ್ಯ ಅಥವಾ ಜ್ಞಾನದ ಅಗತ್ಯವಿಲ್ಲದೇ, ಕೇವಲ ನಿಷ್ಕಲ್ಮಶ ಭಕ್ತಿಯ ಮೂಲಕವೂ ದೇವರನ್ನು ಒಲಿಸಿಕೊಳ್ಳಬಹುದು ಎಂಬುದಕ್ಕೆ ಕನಕದಾಸರು ಅತ್ಯುತ್ತಮ ನಿದರ್ಶನ. ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಉಡುಪಿಯ ಕನಕನ ಕಿಂಡಿಯು ಕನಕದಾಸರ ವ್ಯಕ್ತಿತ್ವ ಮತ್ತು ಭಕ್ತಿಯ ಶ್ರೇಷ್ಠತೆಯನ್ನು ಇಂದಿಗೂ ಜಗತ್ತಿಗೆ ಸಾರಿ ಹೇಳುತ್ತಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಪ್ರತೀಶ್, ತಾಲೂಕು ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಕಾರ್ಯಕ್ರಮಕ್ಕೆ ಸ್ವಾಗತಿಸಿ, ವಂದಿಸಿದರು.