ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪರಾಭಾವ ನಾಮ ಸಂವತ್ಸರದ ಕಾರ್ತಿಕ ಬಹುಳ ಚತುರ್ಥಿ ಉಪರಿ ಪಂಚಮಿಯ ಪ್ರಯುಕ್ತ ನವೆಂಬರ್ 28ರ ಶನಿವಾರದಂದು ‘ಶ್ರೀ ಲಕ್ಷ ದೀಪೋತ್ಸವ’ ಹಾಗೂ ನವೆಂಬರ್ 29ರ ಆದಿತ್ಯವಾರದಂದು ‘ಮರು ದೀಪೋತ್ಸವ’ ಕಾರ್ಯಕ್ರಮಗಳು ಜರುಗಲಿವೆ.
ನ. 28, ಶನಿವಾರ: ಶ್ರೀ ಲಕ್ಷ ದೀಪೋತ್ಸವದ ವಿವರ ಬೆಳಿಗ್ಗೆ 7.10ಕ್ಕೆ ನಿರ್ಮಾಲ್ಯ ವಿಸರ್ಜನೆ ಹಾಗೂ ಅಭಿಷೇಕಾದಿಗಳು ನಡೆಯಲಿವೆ. 9.45ಕ್ಕೆ ಸಹಸ್ರನಾಮ ಆರತಿ ಮತ್ತು ಪುಳಕಾಭಿಷೇಕದ ಆರತಿ, 10.00ಕ್ಕೆ ಮಹಾ ನೈವೇದ್ಯ, ಮಂಗಳಾರತಿ ಹಾಗೂ ಹತ್ತು ಸಮಸ್ತರ ಪ್ರಾರ್ಥನೆ ನೆರವೇರಲಿದೆ. ಬೆಳಿಗ್ಗೆ 11.30ಕ್ಕೆ ಶ್ರೀ ದೇವರು ವನಕ್ಕೆ ಚಿತ್ತೈಸಲಿದ್ದು, ಅಲ್ಲಿ ಧಾತ್ರಿಹವನ ಹಾಗೂ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.
ಮಧ್ಯಾಹ್ನ 3.30ಕ್ಕೆ ಮಹಾ ನೈವೇದ್ಯ, ಪೂರ್ಣಾಹುತಿ, ಮಂಗಳಾರತಿ ನಡೆದು ಹತ್ತು ಸಮಸ್ತರು ಹಾಗೂ ಸೇವಾದಾರರಿಗೆ ಪ್ರಸಾದ ವಿತರಿಸಲಾಗುವುದು. ಸಾಯಂಕಾಲ 4.30ಕ್ಕೆ ‘ವನಭೋಜನ’ ಏರ್ಪಡಿಸಲಾಗಿದೆ.
ಸಂಜೆ 6.00ಕ್ಕೆ ಶ್ರೀ ದೇವಳದಲ್ಲಿ ಗರ್ಭಗೃಹದ ಬಾಗಿಲು ತೆರೆಯಲಿದ್ದು, ರಾತ್ರಿ 8.00ಕ್ಕೆ ಪಟ್ಟದ ದೇವರಿಗೆ ರಾತ್ರಿ ಪೂಜೆ ನಡೆಯಲಿದೆ. ರಾತ್ರಿ 8.30ಕ್ಕೆ ವನದಲ್ಲಿ ದೀಪ ನಮಸ್ಕಾರ, ರಾತ್ರಿ ಪೂಜೆಯೊಂದಿಗೆ ಉತ್ಸವ ಆರಂಭವಾಗಲಿದೆ. ಬಳಿಕ ಶ್ರೀ ದೇವರು ಸಣ್ಣ ಶಾಲೆ, ಸಣ್ಣ ಗುರ್ಜಿ, ಶ್ರೀ ಹನುಮಂತ ದೇವಸ್ಥಾನ ಹಾಗೂ ದೊಡ್ಡ ಗುರ್ಜಿಗೆ ಚಿತ್ತೈಸಿ ಪೂಜೆ ಸ್ವೀಕರಿಸಲಿದ್ದಾರೆ. ದೊಡ್ಡ ಗುರ್ಜಿಯಲ್ಲಿ ಶ್ರೀ ದೇವರು ವಿರಾಜಮಾನರಾದ ಬಳಿಕ ಸ್ಥಳೀಯ ಕಲಾವಿದರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಸನ್ನ ಪೂಜೆ, ಹತ್ತು ಸಮಸ್ತರಿಗೆ ಪ್ರಸಾದ ವಿತರಣೆ, ಲಕ್ಷ ಆರತಿ ಸೇವೆ, ಶ್ರೀ ಮಹಮ್ಮಾಯಿ ದೇವಸ್ಥಾನ ಹಾಗೂ ಶ್ರೀ ಕಾಶೀ ಮಠದಲ್ಲಿ ಪೂಜೆ ನೆರವೇರಿದ ಬಳಿಕ ಶ್ರೀ ದೇವರು ಸಿಂಹಾಸನಕ್ಕೆ ಚಿತ್ತೈಸಲಿದ್ದಾರೆ.
ನ. 29, ಭಾನುವಾರ: ಮರು ದೀಪೋತ್ಸವದ ವಿವರ ಕಾರ್ತಿಕ ಬಹುಳ ಷಷ್ಠಿಯ ದಿನವಾದ ಆದಿತ್ಯವಾರ ಬೆಳಿಗ್ಗೆ 10.00ಕ್ಕೆ ಗರ್ಭಗೃಹದ ಬಾಗಿಲು ತೆರೆದು ನಿರ್ಮಾಲ್ಯ ವಿಸರ್ಜನಾ ಪೂಜೆ ನಡೆಯಲಿದೆ. ಮಧ್ಯಾಹ್ನ 12.00ಕ್ಕೆ ಅವಭೃಥ ಸ್ನಾನದೊಂದಿಗೆ ಪೂಜೆ ನೆರವೇರಿ, ಶ್ರೀ ದೇವರು 5 ಪೇಟೆ ಉತ್ಸವಕ್ಕೆ ಹೊರಡಲಿದ್ದಾರೆ. ಬಳಿಕ ನದಿ ತೀರದಲ್ಲಿ ಕಟ್ಟೆ ಪೂಜೆ ನಡೆದು ಶ್ರೀ ದೇವರು ಸಿಂಹಾಸನಕ್ಕೆ ಚಿತ್ತೈಸಲಿದ್ದು, ದ್ವಾದಶ ಕಲಶ ಸಂಪ್ರೋಕ್ಷಣೆ ಮತ್ತು ಮಹಾಪೂಜೆ ಆರಂಭವಾಗಲಿದೆ.
ಸಂಜೆ 5.30ಕ್ಕೆ ಮಹಾ ನೈವೇದ್ಯ, ಮಂಗಳಾರತಿ ಹಾಗೂ ಸಮಾರಾಧನೆ ನಡೆಯಲಿದೆ. ಸಮಾರಾಧನೆಯ ಬಳಿಕ ಗರ್ಭಗೃಹದ ಬಾಗಿಲು ತೆರೆದು ದೀಪ ನಮಸ್ಕಾರ, ರಾತ್ರಿ ಪೂಜೆ ನೆರವೇರಲಿದೆ. ಮರು ದೀಪೋತ್ಸವದ ಅಂಗವಾಗಿ ನದಿ ತೀರದ ಬಳಿಯ ಸಣ್ಣ ಗುರ್ಜಿಯಲ್ಲಿ ಪೂಜೆ, ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ದೇವರು ಸಿಂಹಾಸನಕ್ಕೆ ಚಿತ್ತೈಸಿ ಬೀಗಮುದ್ರೆ ಹಾಕಲಾಗುವುದು. ಭಕ್ತಾದಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪಾರುಪತ್ಯೆಗಾರರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.