ಬಂಟ್ವಾಳ: ಸಂಸ್ಕೃತ ವಿದ್ವಾಂಸೆ, ಕವಯತ್ರಿ, ಲೇಖಕಿ ಹಾಗೂ ಶ್ರೀ ಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದ ಭಾಷಾಸಹಾಯಕಿಯಾಗಿದ್ದ ಡಾ. ಗೀತಾ ಎನ್ (53) ಶನಿವಾರ (ನ.7) ರಾತ್ರಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಪುತ್ರೋಟಿಬೈಲ್ ನಿವಾಸಿ ದಿ.ನಾರಾಯಣ ರಾವ್ ಅವರ ಕಿರಿಯ ಪುತ್ರಿಯಾಗಿರುವ ಇವರು, ಪತಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನೂ, ಹಿತೈಷಿಗಳನ್ನೂ ಅಗಲಿದ್ದಾರೆ
ಕನ್ನಡದ ಹಲವಾರು ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದ ಅವರು, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಅನೇಕ ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ.ಇತ್ತೀಚೆಗಷ್ಟೇ ಇವರ ಮಜಲ ಮಂದಾರ ಹಾಗೂ ಭಕ್ತಿಯ ಹೊನಲು ಪುಸ್ತಕಗಳು ಬಿಡುಗಡೆ ಹೊಂದಿವೆ. ಇವುಗಳಲ್ಲದೆ ಚಿನ್ಮಯ ರಥ, ಭಾವ ತನ್ಮಯ, ಹಕ್ಕಿಮರಿ ಮತ್ತು ಇತರ ಕಿಶೋರ ಗೀತೆಗಳು, ಷಟ್ಪದಿ ಮಂಜರಿ, ಕೃಷ್ಣ ವಾಣಿಯ ಮುಕ್ತಕ ಮಂಜೂಷ ಹಾಗೂ ಇನ್ನು ಹಲವು ಕವನ ಸಂಕಲನಗಳು ಈಗಾಗಲೇ ಬಿಡುಗಡೆಯಾಗಿವೆ.