ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಆಕ್ಷೇಪ: ಎಐಟಿಯುಸಿ 17ನೇ ದ.ಕ, ಉಡುಪಿ ಜಿಲ್ಲಾ ಸಮ್ಮೇಳನ

ತುಳುವರ ಜೀವನಾಡಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸಲು ಪ್ರಸ್ತಾವಿಸಿರುವುದು ಒಪ್ಪತಕ್ಕದ್ದಲ್ಲ. ಬಹುತ್ವದ ಈ ನಾಡಿನ ಭವ್ಯ ಸಂಸ್ಕೃತಿಯನ್ನು ಹಾಳು ಮಾಡಿ ಬಂಡವಾಳ ಶಾಹಿಗೆ ಮಣೆ ಹಾಕಲು ಮಾಡುತ್ತಿರುವ ಈ ಹುನ್ನಾರವನ್ನು ಈ ಜಿಲ್ಲೆಯ ಕಾರ್ಮಿಕ ವರ್ಗ ಒಪ್ಪಲು ಸಾಧ್ಯವಿಲ್ಲ, ಯಾವ ಬೆಲೆ ತೆತ್ತಾದರೂ ಈ ಮಣ್ಣಿನ ಸಂಸ್ಕೃತಿಯನ್ನು ಉಳಿಸುತ್ತೇವೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಒಕ್ಕೂಟ(ಎಐಟಿಯುಸಿ)ದ ರಾಜ್ಯ ಉಪಾಧ್ಯಕ್ಷರಾದ ಬಿ.ಅಮ್ಜದ್ ಹೇಳಿದ್ದಾರೆ.

ಬಂಟ್ವಾಳದ ಲಯನ್ಸ್ ಭವನದಲ್ಲಿ ಸೋಮವಾರ ಎಐಟಿಯುಸಿಯ 17ನೇ ದ.ಕ. ಮತ್ತು ಉಡುಪಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ತುಳು ಕನ್ನಡಿಗರ ಸಂಸ್ಕಾರ, ಸಂಸ್ಕೃತಿ ಬೆಸೆದುಕೊಂಡಿದೆ. ದೈವಾರಾಧನೆಯನ್ನು ಉಸಿರಾಗಿಸಿಕೊಂಡು ಕೃಷಿ ಮತ್ತು ಇತರ ಕುಲ ಕಸುಬುಗಳನ್ನು  ಮೂಲವಾಗಿಟ್ಟುಕೊಂಡು ಅನೇಕತೆಯಲ್ಲಿ ಏಕತೆಯೊಂದಿಗೆ ತುಳುವರು ಜೀವಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಜಾಹೀರಾತು

ಭಾರತದ ಸ್ವಾತಂತ್ರ್ಯಕ್ಕಾಗಿ ಈ ದೇಶದ ಕಾರ್ಮಿಕರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿಸಿ ಪೂರ್ಣ ಸ್ವಾತಂತ್ರ್ಯಕ್ಕಾಗಿ ಮೊತ್ತ ಮೊದಲು ಆಗ್ರಹಿಸಿದ್ದೇ ಎಐಟಿಯುಸಿ. ಬ್ರಿಟೀಷರ ಆಳ್ವಿಕೆ ಇದ್ದಾಗಲೇ ಕಾರ್ಮಿಕರು ಸಂಘ ಕಟ್ಟುವ ಹಕ್ಕು ಸ್ಥಾಪನೆಗಾಗಿ ಆಂಗ್ಲರ ವಿರುದ್ಧ ಸಮರ ಶೀಲ ಹೋರಾಟ ನಡೆಸಿ ಟ್ರೇಡ್ ಯೂನಿಯನ್ ಕಾಯ್ದೆ-೧೯೨೬ ನ್ನು ಜ್ಯಾರಿಗೊಳಿಸಲಾಯಿತು. ಈ ದೇಶದ ಭವ್ಯ ಸಂಸ್ಕೃತಿಯನ್ನು ಹಾಳು ಮಾಡಿ ಜನರನ್ನು ಜಾತಿ ಧರ್ಮ ಬಾಷೆ ಪ್ರಾಂತ್ಯದ ಆಧಾರದಲ್ಲಿ ವಿಘಟಿಸಿ ಸಾರ್ವಜನಿಕ ಸೊತ್ತು ಸಂಸ್ಥೆಗಳನ್ನು ಬಂಡವಾಳಿಗರಿಗೆ ಮಾರಾಟ ಮಾಡಿ ಸಂವಿಂಧಾನದ ಆಶಯಗಳನ್ನು ಮಣ್ಣು ಪಾಲು ಮಾಡಲು ಪ್ರಸ್ತುತ ಸರಕಾರಗಳು ಕಾರ್‍ಯಪ್ರವೃತ್ತವಾಗಿವೆ ಎಂದು ಆರೋಪಿಸಿದರು. ಕಾರ್ಮಿಕ ವರ್ಗ ಉದ್ಯೋಗವಿಲ್ಲದೇ, ಉದ್ಯೋಗದ ರಕ್ಷಣೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಪ್ರಭುತ್ವದ ಈ ಹುನ್ನಾರಗಳನ್ನು ತಿಳಿದುಕೊಂಡು ದುಡಿಯುವ ವರ್ಗ ಸಂಘಟಿತರಾಗಿ ತನ್ನ ಹಕ್ಕುಗಳಿಗಾಗಿ, ದೇಶದ ಸ್ವಾಭಿಮಾನಕ್ಕಾಗಿ ನಿರಂತರ ಹೋರಾಟಕ್ಕೆ ಧುಮುಕಬೇಕಾಗಿದೆ. ಈ ನಿಟ್ಟಿನಲ್ಲಿ ೧೦೬ ವರ್ಷಗಳ ಸುದೀರ್ಘ ಹೋರಾಟದ ಬದ್ಧತೆಯ ಪರಂಪರೆಯಿರುವ ಎಐಟಿಯುಸಿ ಕಾರ್ಮಿಕ ಒಕ್ಕೂಟದಡಿ ಮುನ್ನಡೆಯಬೇಕು ಎಂದರು.

VNR GOLD

ಬಹಿರಂಗ ಸಭೆಯನ್ನುದ್ದೇಶಿಸಿ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್‍ಯದರ್ಶಿ ಬಿ.ಶೇಖರ್, ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ವಿ.ಎಸ್ ಬೇರಿಂಜ ಮಾತನಾಡಿದರು. ಅಧ್ಯಕ್ಷತೆಯನ್ನು ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಎಚ್.ವಿ.ರಾವ್ ವಹಿಸಿದ್ದರು.

ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಎ.ಪಿ.ರಾವ್, ಎನ್ ಎಫ್ ಐ ಡಬ್ಲ್ಯೂ ಜಿಲ್ಲಾ ನಾಯಕಿ ಭಾರತಿ ಪ್ರಶಾಂತ್, ವಿವಿಧ ಸಾಮೂಹಿಕ ಸಂಘಟನೆಗಳನ್ನು ಪ್ರತಿನಿಧೀಕರಿಸುವ ಎಐಟಿಯುಸಿ ಮುಖಂಡರುಗಳಾದ ಬಿ.ಬಾಬು ಭಂಡಾರಿ, ಉಮಾವತಿ ಕುರ್ನಾಡು, ಮೀನಾಕ್ಷಿ ಶಾಂತಿಪಳಿಕೆ,  ಶಶಿಕಲಾ ಗಿರೀಶ್ ಉಡುಪಿ, ಒ ಕೃಷ್ಣ ವಿಟ್ಲ, ಶಿವಾನಂದ ಉಡುಪಿ ಉಪಸ್ಥಿತರಿದ್ದರು.

ಬಹಿರಂಗ ಸಭೆಗೆ ಮುನ್ನ ಬಿಸಿರೋಡು ಅಂಚೆ ಕಚೇರಿ ಬಳಿ ಇರುವ ಸಿಪಿಐ ಕಚೇರಿಯಿಂದ ಲಯನ್ಸ್ ಸೇವಾ ಮಂದಿರದ ವರೆಗೆ ಮೆರವಣಿಗೆ ನಡೆಯಿತು. ಎಐಟಿಯುಸಿ ಜಿಲ್ಲಾ ಕಾರ್‍ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ನಿರೂಪಿಸಿದರು. ಕರುಣಾಕರ ಮಾರಿಪಳ್ಳ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.