ಸಿದ್ದಕಟ್ಟೆ: ಸಹಕಾರ ಸಂಘಗಳು ಕೇವಲ ಸದಸ್ಯರ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ, ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಾಚರಿಸಿದಾಗ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪರಿಸರ ಸಂರಕ್ಷಣೆ ಸೇರಿದಂತೆ ದೇಶಾದ್ಯಂತ ಜಾರಿಯಲ್ಲಿರುವ ‘ಪಂಚ ಪರಿವರ್ತನೆ’ಗಳಿಗೆ ಆದ್ಯತೆ ನೀಡಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು.
ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ಕೃಷ್ಣ ರೈ ರೈತ ಸಭಾಂಗಣ’ದಲ್ಲಿ ಜರುಗಿದ 2025-26ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶುದ್ಧ ಗಾಳಿ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರೂ ತಮ್ಮ ಹಿರಿಯರ ನೆನಪಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ‘ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ’ದಡಿ ಕೃಷಿಕರು ಹಾಗೂ ಗ್ರಾಹಕರಿಗೆ ದೇಶಿಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಘದ ಕೇಂದ್ರ ಕಚೇರಿ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರ (CSC) ತೆರೆದು, ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲಾ ಸರ್ಕಾರಿ ಹಾಗೂ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಸಂಘದ ಆರ್ಥಿಕ ಸಾಧನೆ ಮತ್ತು ಶೇ. 12 ಲಾಭಾಂಶ:
ಸಂಘದ ಆರ್ಥಿಕ ಪ್ರಗತಿಯ ವಿವರ ಹಂಚಿಕೊಂಡ ಅಧ್ಯಕ್ಷರು, ಗತ ಸಾಲಿನಲ್ಲಿ ಸಂಘವು ಸಾಲ ವಿತರಣೆ ಹಾಗೂ ವ್ಯವಹಾರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ ಎಂದರು:
ಕೃಷಿ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ:
ಸಂಘವು ಪ್ರಸ್ತುತ 3,904 ‘ಎ’ ತರಗತಿ ಹಾಗೂ 1,981 ‘ಡಿ’ ತರಗತಿ ಸೇರಿ ಒಟ್ಟು 5,885 ಸದಸ್ಯರನ್ನು ಹೊಂದಿದೆ.
ಪ್ರಶಸ್ತಿ ಮತ್ತು ಗ್ರೇಡಿಂಗ್:
ಸಂಘದ ನಿರಂತರ ಪ್ರಗತಿಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (SCDCC) ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಘವು ಸತತವಾಗಿ ಪ್ರಶಸ್ತಿಗಳಿಗೆ ಭಾಜನವಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಗ್ರೇಡ್ ಪಡೆದುಕೊಂಡಿದ್ದು, ಶೇ. 98 ರಷ್ಟು ಸಾಲ ವಸೂಲಾತಿ ಸಾಧಿಸಿದೆ. ಪ್ರಸಕ್ತ ಸಾಲಿನಲ್ಲಿ ಶೇ. 100ರಷ್ಟು ವಸೂಲಾತಿ ಗುರಿ ತಲುಪಲು ಸದಸ್ಯರು ಸಹಕರಿಸಬೇಕಾಗಿ ಕೋರಿದರು.
ಸಾಮಾಜಿಕ ಮತ್ತು ಆರೋಗ್ಯ ಭದ್ರತೆ:
2025-26ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯಡಿ 612 ಕುಟುಂಬಗಳ 2,307 ಸದಸ್ಯರನ್ನು ನೋಂದಾಯಿಸಲಾಗಿದ್ದು, ₹4.23 ಲಕ್ಷ ಪ್ರೀಮಿಯಂ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲಾಗಿದೆ.
೩,೦೦೦ ಹಲಸಿನ ಗಿಡ ವಿತರಣೆ ಹಾಗೂ ಉಚಿತ ಆರೋಗ್ಯ ಶಿಬಿರ
ಮಹಾಸಭೆಯ ನೆನಪಿಗಾಗಿ ಸಂಘದ ಪ್ರತಿಯೊಬ್ಬ ಸದಸ್ಯರಿಗೂ ತಲಾ ಒಂದೊಂದು ಹಲಸಿನ ಗಿಡ ನೀಡುವ ಕಾರ್ಯಕ್ರಮಕ್ಕೆ ವೇದಿಕೆಯಲ್ಲಿ ಸಾಂಕೇತಿಕ ಚಾಲನೆ ನೀಡಲಾಯಿತು. ಒಟ್ಟಾರೆಯಾಗಿ ಸುಮಾರು 3,000 ಹಲಸಿನ ಸಸಿಗಳನ್ನು ಸದಸ್ಯರಿಗೆ ವಿತರಿಸಲಾಯಿತು.
ಇದರೊಂದಿಗೆ, ಪ್ರಧಾನ ಮಂತ್ರಿ ಜನೌಷಧಿ ಸಿದ್ದಕಟ್ಟೆ ಘಟಕದ ವತಿಯಿಂದ ಸಂಘದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಆಸಕ್ತ ಸದಸ್ಯರಿಗೆ ರಕ್ತದೊತ್ತಡ (BP) ಹಾಗೂ ಸಕ್ಕರೆ ಕಾಯಿಲೆ (Sugar) ತಪಾಸಣೆ ನಡೆಸಲಾಯಿತು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ವೀರಪ್ಪ ಪರವ, ಜಾರಪ್ಪ ನಾಯ್ಕ, ಮಂದರಾತಿ ಎಸ್. ಶೆಟ್ಟಿ, ಪುಷ್ಪಲತಾ ಎಸ್. ಆರ್., ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಹಾಗೂ ನವೀನ್ ಹೆಗ್ಡೆ ಉಪಸ್ಥಿತರಿದ್ದರು.
ಅಲ್ಲದೆ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್. ಪ್ರಭಾಕರ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಕುಕ್ಕಿಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ, ರಾಯಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಸಂಗಬೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸುರೇಶ್ ಕುಲಾಲ್, ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ ಸೇರಿದಂತೆ ಪ್ರಮುಖರಾದ ಸುದರ್ಶನ್ ಮಂಜಿಲ, ಡಾ! ಶ್ರೀಧರ್ ಶೆಟ್ಟಿ, ಲಕ್ಷ್ಮೀಧರ ಶೆಟ್ಟಿ, ಜಗದೀಶ್ ಆಳ್ವ, ರಂಜನ್ ಕುಮಾರ್ ಶೆಟ್ಟಿ, ಡೊಂಬಯ ಅರಳ, ಲಿಂಗಪ್ಪ ಪೂಜಾರಿ, ನಾರಾಯಣ ನಾಯಕ್, ಕೆ. ಸದಾಶಿವ ಕರ್ಪೆ, ಹರೀಶ್ ಆಚಾರ್ಯ, ಉಮೇಶ್ ಗೌಡ, ಅರುಣಾ ಶೆಟ್ಟಿ, ವಸಂತ ಗೌಡ, ಮಾಧವ ಶೆಟ್ಟಿಗಾರ್, ಚಂದ್ರಶೇಖರ ಗೌಡ, ಗೋಪಾಲ ರೈ, ಜಯರಾಮ ಅಡಪ ಹಾಗೂ ವಿವಿಧ ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ ಸ್ವಾಗತಿಸಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ಪೂಜಾರಿ ವಂದಿಸಿದರು.