PHOTO CREDIT: S.N.BHAT
ಈ ಬಾರಿ ಯಕ್ಷಗಾನ ಅಕಾಡೆಮಿ ಘೋಷಿಸಿರುವ ಯಕ್ಷಸಿರಿ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಕೋಡಪದವು ಕುಕ್ಕಿಲ ನಿವಾಸಿ ಪರಂಪರೆಯ ಶೈಲಿಯ ಹವ್ಯಾಸಿ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆಗೊಂಡಿದ್ದಾರೆ.
ಸುಮಾರು 39 ವರ್ಷಗಳಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಹವ್ಯಾಸಿ ಮಹಿಳಾ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಅವರು ಪ್ರಸಿದ್ಧ ಭಾಗವತ ಮಾಂಬಾಡಿ ನಾರಾಯಣ ಭಾಗವತರ ಮೊಮ್ಮಗಳು (ಮಗಳ ಮಗಳು).
ಬಂಟ್ವಾಳ ತಾಲೂಕಿನ ಕೋಡಪದವು ನಿವಾಸಿ ಪ್ರಗತಿಪರ ಕೃಷಿಕ ಪುರಂದರವಿಠಲ ಕುಕ್ಕಿಲ ಅವರ ಪತ್ನಿಯಾಗಿರುವ ದುರ್ಗಾಪರಮೇಶ್ವರಿ ಅವರ ಮಗ ಮತ್ತು ಮಗಳೂ ಯಕ್ಷಗಾನ ಆಸಕ್ತರು.
ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಕೆರೆಮೂಲೆ ಎಂಬಲ್ಲಿ 1971 ಮೇ 30ರಂದು ಕೃಷ್ಣ ಭಟ್ಟ ಮತ್ತು ದ್ರೌಪದಿ ಅಮ್ಮ ಅವರ ಪುತ್ರಿಯಾಗಿ ಜನಿಸಿದ ಅವರ ತಾಯಿಯ ತಂದೆ ಪ್ರಸಿದ್ಧ ಕಲಾವಿದರಾದ ಮಾಂಬಾಡಿ ನಾರಾಯಣ ಭಾಗವತರು. ಸೋದರಮಾವ ಯಕ್ಷಗುರು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರೂ ಹಿಮ್ಮೇಳ ಗುರುಗಳು. ಸಹೋದರರಾದ ಶಂಕರನಾರಾಯಣ ಭಟ್ ಬಾಯಾರು ಮತ್ತು ನಾರಾಯಣ ಭಟ್ ಅವರೂ ಹವ್ಯಾಸಿ ಕಲಾವಿದರಾಗಿದ್ದು, ಪರಂಪರಾಗತವಾಗಿಯೇ ಬಂದ ಯಕ್ಷಗಾನ ಕಲೆಯನ್ನು ಬಾಲ್ಯದಲ್ಲೇ ಅಭ್ಯಸಿಸಿದ್ದರು. ಅಣ್ಣಂದಿರು ಅಜ್ಜ ಮಾಂಬಾಡಿ ನಾರಾಯಣ ಭಾಗವತರಲ್ಲಿ ಯಕ್ಷಗಾನ ಹಿಮ್ಮೇಳ ಅಭ್ಯಸಿಸಿ, ಮನೆಯಲ್ಲಿ ಕಲಿಯುತ್ತಿದ್ದುದು ಅದು ಪೂರಕವಾಯಿತು. ಅಣ್ಣ ನಾರಾಯಣ ಭಟ್ ಅವರಿಂದ ಪೂರ್ವರಂಗದ ಪಾಠ ಹೇಳಿಸಿಕೊಂಡ ಅವರು, 1987ರಲ್ಲಿ ಮೊದಲ ಬಾರಿ ಬಯಲಾಟದಲ್ಲಿ ವೇದಿಕೆಯಲ್ಲಿ ಭಾಗವತಿಕೆ ಮಾಡಿದ್ದರು.
1990ರಲ್ಲಿ ಹಿರಿಯ ಯಕ್ಷಗಾನ ಸಂಶೋಧಕ, ವಿದ್ವಾಂಸ ಕುಕ್ಕಿಲ ಕೃಷ್ಣ ಭಟ್ಟರ ಪುತ್ರ ಪುರಂದರ ವಿಠಲರೊಂದಿಗೆ ವಿವಾಹವಾದ ಅವರ ಯಕ್ಷಗಾನ ಕಲಾಭ್ಯಾಸಕ್ಕೆ ಪತಿಯಿಂದ ಪ್ರೋತ್ಸಾಹ ದೊರಕಿತು.
1993ರಿಂದ ಆಕಾಶವಾಣಿ ಕಲಾವಿದೆಯಾದ ಅವರು, ಅನೇಕ ಸಂಘ, ಸಂಸ್ಥೆ, ಹವ್ಯಾಸಿ ಆಟ, ತಾಳಮದ್ದಳೆ, ಮಹಿಳಾ, ಮತ್ತು ಮಕ್ಕಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ವೇದಿಕೆಯನ್ನೇರಿದರು. ಬೆಂಗಳೂರು ದೂರದರ್ಶನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಬಜಕ್ಕಳ ಗಣಪತಿ ಭಟ್ ಅವರಿಂದ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿದ್ದಾರೆ.ಕಿನ್ನಿಗೋಳಿ ಯುಗಪುರುಷದಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೋಡಪದವು ತಂಡಕ್ಕೆ ಲಭಿಸಿತ್ತು. ಭಾಗವತಿಕೆಯನ್ನು ದುರ್ಗಾಪರಮೇಶ್ವರಿ ಕುಕ್ಕಿಲ ಮಾಡಿದ್ದರು.
ನನ್ನ ಅಣ್ಣ ನಾರಾಯಣ ಭಟ್ ಹವ್ಯಾಸಿ ಭಾಗವತ. ಮತ್ತೊಬ್ಬ ಅಣ್ಣ ಶಂಕರನಾರಾಯಣ ಭಟ್ ಬಾಯಾರು (ಎಸ್.ಎನ್. ಭಟ್ ಬಾಯಾರು) ಹವ್ಯಾಸಿ ಮದ್ದಳೆಗಾರ. ಹೀಗಾಗಿ ಮನೆಯಲ್ಲೇ ಯಕ್ಷಗಾನದ ವಾತಾವರಣ ಇತ್ತು. ನನಗೂ ಆಸಕ್ತಿ ಇದ್ದ ಕಾರಣ, ಯಕ್ಷಗಾನ ಪದ ಹಾಡುವುದು ಕಷ್ಟವಾಗಲಿಲ್ಲ. ಬಹುಪಾಲು ನೋಡಿ ಕಲಿತೆ. ಅಣ್ಣನಿಂದ ಪೂರ್ವರಂಗದ ಪಾಠ ಅಭ್ಯಾಸ ಮಾಡಿಕೊಂಡೆ. ತಾಯಿಯ ತಂದೆ (ಅಜ್ಜ) ಮಾಂಬಾಡಿ ನಾರಾಯಣ ಭಾಗವತರ ಆಶೀರ್ವಾದವೂ ಇತ್ತು. ಸೋದರಮಾವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಪ್ರೋತ್ಸಾಹವೂ ಇತ್ತು. ಎಲ್ಲಕ್ಕಿಂತ ಹೆಚ್ಚು ನನಗಿದ್ದ ಯಕ್ಷಗಾನದ ಅಭಿಮಾನ ಪ್ರೀತಿ, ವೇದಿಕೆಯಲ್ಲಿ ಜಾಗಟೆ ಹಿಡಿಯಲು ಅವಕಾಶ ಮಾಡಿಕೊಟ್ಟಿತು ಎನ್ನುತ್ತಾರೆ ದುರ್ಗಾಪರಮೇಶ್ವರಿ ಕುಕ್ಕಿಲ.