ಆಗಸ್ಟ್ 30ರಂದು ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆ, ಗುರು ಪೂಜೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ದೇಯಿ ಬೈದೆತಿ ಸಿನೆಮಾ ಪ್ರದರ್ಶನ ಕಾರ್ಯಕ್ರಮ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಆಶ್ರಯದಲ್ಲಿ ನಡೆಯಲಿದ್ದು, ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆ ನಡೆಯಲಿದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ವೃತ್ತ ಉದ್ಘಾಟಿಸುವರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಗ್ಗೆ 7ರಿಂದ 8.30ವರೆಗೆ ಭಜನೆ, 8.30ರಿಂದ 9.30ರವರೆಗೆ ಗುರುಪೂಜೆ, ಬೆಳಗ್ಗೆ 11ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, 10.30ಕ್ಕೆ ವೃತ್ತ ಲೋಕಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಬಳಿಕ ತುಳು ಚಲನಚಿತ್ರ ದೇಯಿ ಬೈದೆತಿ ಉಚಿತ ಪ್ರದರ್ಶನ ಕಾರ್ಯಕ್ರಮ ನಡೆಯುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ರಾಜೇಶ್ ನಾಯ್ಕ್, ಸುನೀಲ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಬುಡಾ ಅಧ್ಯಕ್ಷ ಬೇಬಿ ಕುಂದರ್ ಮತ್ತು ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಭಾಗವಹಿಸುವರು, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರೂ ವೃತ್ತ ಲೋಕಾರ್ಪಣೆ ಸಂದರ್ಭ ಉಪಸ್ಥಿತರಿರುವರು ಎಂದರು. ಈ ವೃತ್ತ ಮಂಗಳೂರಿನ ಹೆಬ್ಬಾಗಿಲು ಆಗುತ್ತದೆ ಎಂದರು.
ವೃತ್ತದ ಮೂಲಕ ಸಮಾನತೆ ಸಂದೇಶ:
ಸಮಾಜಕ್ಕೆ ಸಾಮರಸ್ಯ ಸಹಬಾಳ್ವೆ ಸಮಾನತೆಯ , ಮಾನವ ಧರ್ಮವೇ ಶ್ರೇಷ್ಠ ಧರ್ಮ ಎಂಬುದಾಗಿ ಸಂದೇಶವನ್ನು ಸಾರಿದ ಸಂತ, ಸಮಾಜ ಸುಧಾರಕ, ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶಗಳು ಸರ್ವಕಾಲಕ್ಕೂ ಅನ್ವಿಯಿಸುತ್ತದೆ. ಸಮಾಜದ ಕನಸಾಗಿದ್ದ ಹಾಗೂ ಬಹುಕಾಲದ ಬೇಡಿಕೆ. ಬಿಸಿರೋಡಿನ ಹೃದಯಭಾಗದಲ್ಲಿರುವ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡುವಂತೆ ಹಿಂದೆ ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ತಾಲೂಕು ಸಂಘ ಪುರಸಭೆಗೆ ಹಾಗೂ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರಿಗೆ ಮನವಿಯನ್ನು ಸಲ್ಲಿಸಿತ್ತು. 2016ರ ಪುರಸಭೆಯ ಸಭೆಯಲ್ಲಿ ಬಹುಮತದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂಬುದಾಗಿ ಅಂಗೀಕಾರಗೊಳಿಸಿದ್ದರು. ಬಳಿಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಪುರ ಸಭೆಯ ನಿರ್ಣಯದ ಜೊತೆ ಮನವಿ ಮಾಡಿಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಬಿಲ್ಲವ ಸಂಘದ ವತಿಯಿಂದಲೇ ಖರ್ಚುವೆಚ್ಚವನ್ನು ಭರಿಸಿ ವೃತ್ತ ನಿರ್ಮಾಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿತ್ತು. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಆರಂಭವಾಗುವ ವೇಳೆಗೆ ವೃತ್ತ ತೆರವುಗೊಳಿಸಲಾಗಿತ್ತು. ಆ ಸಂದರ್ಭ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರಲ್ಲಿ ಮನವಿಮಾಡಿಕೊಂಡಾಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು.ಇದೀಗ ಪ್ರಾಧಿಕಾರದ ವತಿಯಿಂದಲೇ ನಿರ್ಮಾಣಗೊಂಡಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆಗೆ ಸಿದ್ಧಕೊಂಡಿದೆ ಎಂದರು. ಈ ವೃತ್ತವನ್ನು ತಜ್ಞ ಇಂಜಿನಿಯರುಗಳು ನಿರ್ಮಿಸಿದ್ದು, ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ನಿಯಮಾನುಸಾರವಾಗಿ ರೂಪುಗೊಂಡಿದೆ. ಇದರಲ್ಲಿ ಯಾವುದೇ ಕಟೌಟ್, ಬಂಟಿಂಗ್, ಬ್ಯಾನರ್ ಅಳವಡಿಸುವಂತಿಲ್ಲ. ಇದರ ನಿರ್ವಹಣೆಯನ್ನು ಸಂಘ ಮಾಡಲಿದೆ ಎಂದವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೇಲ್ಕಾರ್, ಮಾಜಿ ಅಧ್ಯಕ್ಷ ಬೇಬಿ ಕುಂದರ್, ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು.