PHOTO CREDIT: S.N.BHAT BAYARU
ಈ ಬಾರಿ ಯಕ್ಷಗಾನ ಅಕಾಡೆಮಿ ಘೋಷಿಸಿದ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಗಡಿನಾಡು ಕಾಸರಗೋಡಿನ ಸಾಹಿತಿ, ವಿಮರ್ಶಕ, ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಪಾರ್ವತಿ ಅವರ ಪುತ್ರ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಯಕ್ಷಗಾನ ಭಾಗವತಿಕೆಯ ಜೊತೆಗೆ ಸಂಶೋಧಕರಿಗೂ ಪ್ರೇರಕರಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಮಯ್ಯರು ತಮ್ಮ ಮಧುರ ಗಾನ ಶೈಲಿ ಹಾಗೂ ವಿಶಿಷ್ಟ ಹಾಡುಗಾರಿಕೆಯಿಂದ ಯಕ್ಷಗಾನ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ತಂದೆ ಸಿರಿಬಾಗಿಲು ವೆಂಕಪಯ್ಯ (ಗಡಿನಾಡು ಕಾಸರಗೋಡಿನ ಸಾಹಿತಿ, ವಿಮರ್ಶಕ, ಸಂಶೊಧಕ), ತಾಯಿ-ಪಾರ್ವತಿ (ತೆಂಕು ತಿಟ್ಟು ನ ಹಿರಿಯ ಭಾಗವತರು ಪುತ್ತಿಗೆ ರಾಮಕೃಷ್ಣ ಜೊಯಿಸರ ಮಗಳು). 1967ರ ಅಕ್ಟೋಬರ್ 25ರಂದು ಜನಿಸಿದ ಅವರು, ಪ್ರಸ್ತುತ ಪ್ರಸಿದ್ಧ ಬಾಗವತರಾಗಿ ಗುರುತಿಸಿಕೊಂಡವರು. ಪತ್ನಿ ಸುಮಿತ್ರಾ ಆರ್.ಮಯ್ಯ , ಮಕ್ಕಳಾದ ಶ್ರೀಮುಖ, ಶ್ರೀರಾಜ್ ಜೊತೆ ಸಿರಿಬಾಗಿಲಿನಲ್ಲಿ ನೆಲೆಸಿದ್ದಾರೆ.
ಪ್ರಸಿದ್ಧ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಬಳಿ ಭಾಗವತಿಕೆ ಕಲಿತ ಮಯ್ಯರು ಮೂರು ವರ್ಷ ಕಟೀಲು ಮೇಳ, ಒಂದು ವರ್ಷ ಬಪ್ಪನಾಡು ಮೇಳದಲ್ಲಿ ತಿರುಗಾಟ ನಡೆಸಿದರು. ಬಳಿಕ 37 ವರ್ಷಗಳ ಸುದೀರ್ಘ ತಿರುಗಾಟವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ನಡೆಸಿದ್ದು, ಪ್ರಸ್ತುತ ಅವರು ಪ್ರಧಾನ ಭಾಗವತರಾಗಿದ್ದಾರೆ. ನೂರಕ್ಕೂ ಹೆಚ್ಚು ಸನ್ಮಾನ, ಪ್ರಶಸ್ತು, ಪುರಸ್ಕಾರಗಳು ಅವರ ಕಲಾಸೇವೆಗೆ ಸಂದಿವೆ. ಬಹರೈನ್, ದುಬೈ ಸಹಿತ ವಿದೇಶಗಳಲ್ಲಿ, ಹಾಗೆಯೇ ದೇಶದಾದ್ಯಂತ ಯಕ್ಷಗಾನ ಪ್ರದರ್ಶನಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.
ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಮೂಲಕ ಸಾಂಸ್ಕೃತಿಕ ಭವನ ರಚಿಸಿ,ಪುಸ್ತಕ ಪ್ರಕಾಶನ, ಅದ್ಯಯನ ಯೋಗ್ಯ ಹಲವು ಕಾರ್ಯಕ್ರಮ ನಡೆಸಿದ ಕೀರ್ತಿ ಅವರದ್ದು. ಇಲ್ಲಿ ಅಕಾಡೆಮಿಯೊಂದು ನಡೆಸುವ ಅಧ್ಯನಕ್ಕೆ ಪೂರಕವಾದ ಕೆಲಸ ಕಾರ್ಯಗಳನ್ನು ಅವರು ನಡೆಸುತ್ತಿದ್ದು, ಗಡಿನಾಡ ಕಾಸರಗೋಡಿನಲ್ಲಿ ಕನ್ನಡದ ಕಂಪನ್ನು ಹರಡುವುದರಲ್ಲೂ ಮುಂಚೂಣಿಯಲ್ಲಿದ್ದಾರೆ. ಮಯ್ಯ ಅವರ ವಿಳಾಸ “ಯಕ್ಷಾನುಗ್ರಹ ” ಅಂಚೆಯ- ಸಿರಿಬಾಗಿಲು, ವಯಾ- ಕೂಡ್ಲು, ಕಾಸರಗೋಡು, 671124. ಮೊಬೈಲ್ ಸಂಖ್ಯೆ: 9448344380, 8073740237