ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕನೋರ್ವ ಬಿಸಿಯೂಟ ಕಾರ್ಮಿಕರು ಕರ್ತವ್ಯ ನಿರತರಾಗಿದ್ದ ವೇಳೆ ಅವಘಡ ನಡೆಯುವ ಆತಂಕವನ್ನು ಗಮನಿಸಿ ಸಮಯಪ್ರಜ್ಞೆ ಮೆರೆದು ತಪ್ಪಿಸಿದ ಘಟನೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಕ್ಸ್ ಖಾತೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಶಾಲೆಯ ಅಕ್ಷರ ದಾಸೋಹದ ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುಚ್ಚಾಲಿತ ತುರಿಮಣೆ ಬಳಿ ಆಕಸ್ಮಿಕವಾಗಿ ಅವರ ಕೈಬೆರಳು ಸಿಕ್ಕಿಕೊಂಡಿದ್ದು, ಕೂಡಲೇ ಅವರು ಕಿರುಚಿದ ವೇಳೆ 5ನೇ ತರಗತಿ ಬಾಲಕ ಮನ್ವಿತ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮತ್ತಷ್ಟು ಅನಾಹುತವನ್ನು ತಪ್ಪಿಸಿದ್ದಾನೆ.
ಈ ಕುರಿತು ತನ್ನ ಎಕ್ಸ್ ಖಾತೆ ಮೂಲಕ ಅಭಿನಂದನೆ ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಮತ್ತು ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಿದ ಮನ್ವಿತ್‌ಗೆ ಹೃದಯಪೂರ್ವಕ ಅಭಿನಂದನೆಗಳು. ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡು ಅವರು ನೋವಿನಿಂದ ಕಿರುಚುತ್ತಿದ್ದಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ ಮನ್ವಿತ್ ತಕ್ಷಣ ವಿದ್ಯುತ್ ಸ್ವಿಚ್ ಆಫ್ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾನೆ. ಬಾಲಕನ ಒಂದು ಕ್ಷಣದ ಜಾಗರೂಕತೆ, ಸರಿಯಾದ ನಿರ್ಧಾರವೊಂದು ಅಡುಗೆ ಸಿಬ್ಬಂದಿಯ ಕೈಬೆರಳನ್ನು ಉಳಿಸಿದೆ. ಮನ್ವಿತ್‌ನ ಈ ಮಾನವೀಯ ಕಾಳಜಿ, ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ. ಬಾಲಕನ ಮುಂದಿನ ಭವಿಷ್ಯ ಉಜ್ವಲವಾಗಲಿ, ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.