ಬಂಟ್ವಾಳ: ಆಟಿ ಅಮವಾಸ್ಯೆ (ಆಷಾಢ ಅಮವಾಸ್ಯೆ)ಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎರಡು ಪರ್ವತ ಕ್ಷೇತ್ರಗಳಲ್ಲಿ ಭಕ್ತರು ಬೆಳಗ್ಗಿನಿಂದಲೇ ಆಗಮಿಸಿ ಪುಣ್ಯತೀರ್ಥ ಸ್ನಾನ ಮಾಡಿ ಪುನೀತರಾದರು.
ಬುಧವಾರ ಬೆಳಗ್ಗಿನಿಂದ ಮಳೆಯನ್ನೂ ಲೆಕ್ಕಿಸದೆ ಆಗಮಿಸಿದ ನೂರಾರು ಭಕ್ತರು ನರಹರಿ ಪರ್ವತ ಸದಾಶಿವ ಕ್ಷೇತ್ರ ಹಾಗು ಕಾರಿಂಜದ ಕಾರಿಂಜೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ಪರ್ವತವೇರಿ ದೇವರ ದರ್ಶನ ಪಡೆದರು.
ನರಹರಿ ಪರ್ವ ಕ್ಷೇತ್ರ ಮಂಗಳುರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪವಿದ್ದರೆ, ಕಾರಿಂಜ ಕ್ಷೇತ್ರ ಮಂಗಳೂರಿನಿಂದ ಬಿ.ಸಿ.ರೊಡ್ ಮೂಲಕ ಪುಂಜಾಲಕಟ್ಟೆ ಬೆಳ್ತಂಗಡಿ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಸಿಗುವ ವಗ್ಗ ಎಂಬ ಪ್ರದೇಶದ ಸಮೀಪವಿದೆ. ಎರಡೂ ಪರ್ವತ ಕ್ಷೇತ್ರಗಳು.
ಆಟಿ ಅಮಾವಾಸ್ಯೆಯ ಮುಂಜಾನೆ ಭಕ್ತರು ಮುಖ್ಯವಾಗಿ ನವ ವಧೂವರರು ನರಹರಿ ಪರ್ವತ ಏರಿ ಇಲ್ಲಿನ ನೀರಿನ ಕುಂಡಗಳಾದ ಶಂಖ, ಚಕ್ರ, ಗದಾ, ಪಧ್ಮಗಳೆಂಬ ನಾಲ್ಕು ತೀರ್ಥ ಕೂಪಗಳಲ್ಲಿ ಮಿಂದು ನಾಗದೇವರಿಗೆ, ವಿನಾಯಕ ದೇವರಿಗೆ, ಸದಾಶಿವ ದೇವರಿಗೆ ಬಗೆಬಗೆಯ ಸೇವೆ ಸಲ್ಲಿಸಿದರು. ಪ್ರಸ್ತುತ ದೇವಸ್ಥಾನ ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ ನೇತೃತ್ವದಲ್ಲಿ 6 ಕೋಟಿ ರೂ ವೆಚ್ಚದಲ್ಲಿ ನವೀಕರಣವಾಗುತ್ತಿದ್ದು, ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಸಮಿತಿ ಅಧ್ಯಕ್ಷರಾಗಿ ಡಾ, ಆತ್ಮರಂಜನ್ ರೈ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕಾರಿಂಜ ಸನ್ನಿಧಿ:
ಕಾರಿಂಜೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ಆಟಿಯ ಅಮೃತ ಎಂದು ಬಣ್ಣಿಸಲಾದ ಹಾಳೆ ಮರದ ಕೆತ್ತೆ ಕಷಾಯ ವಿತರಣೆ ನಡೆಯಿತು. ಈ ವೇಳೆ ವಿಶೇಷ ತೀರ್ಥಸ್ನಾನ ಮತ್ತು ದೇವರಿಗೆ ವಿಶೇಷ ಪೂಜೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ವೀರೇಂದ್ರ ಅಮೀನ್ ಸಹಿತ ಸಮಿತಿ ಸದಸ್ಯರು ಮುಂದಾಳತ್ವ ವಹಿಸಿದ್ದರು.
ದೇವಸ್ಥಾನದ ದಕ್ಷಿಣ ಭಾಗದ ತಳದಲ್ಲಿರುವ ಗದಾತೀರ್ಥವೆಂಬ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿ ಪಾರ್ವತಿ ಪರಮೇಶ್ವರರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಈಡೇರಿಸಿಕೊಳ್ಳುವ ಸಂಪ್ರದಾಯ ಕಾರಿಂಜ ಕ್ಷೇತ್ರದಲ್ಲಿದ್ದು, ಭಕ್ತರು ಸಾಲುಗಟ್ಟಿ ನಿಂತು ಪುಣ್ಯಕಾರ್ಯ ಕೈಗೊಂಡರು.