ಫರಂಗಿಪೇಟೆ ಸಮೀಪ ಹೆದ್ದಾರಿಯಲ್ಲಿ ಮಿನಿ ಬಸ್ ಪಲ್ಟಿ, ಓರ್ವ ಮೃತ್ಯುವಶ
ಸೀಮಂತ ಕಾರ್ಯಕ್ರಮ ಮುಗಿಸಿ ವಾಪಾಸು ಮನೆಗೆ ಹೋಗುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಗಾಯಗೊಂಡಿದ್ದ ಪ್ರಯಾಣಿಕರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಮಂಗಳೂರು ಮೂಲದ ವಿಕಾಶ್ ಎಂಬವರು ಸಾವನ್ನಪ್ಪಿದವರು. 9 ಮಂದಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಎಂಬಲ್ಲಿಗೆ ಸೀಮಂತ ಕಾರ್ಯಕ್ರಮಕ್ಕೆ ಮಿನಿ ಬಸ್ ನಲ್ಲಿ ಬಂದವರು ವಾಪಸು ಮಂಗಳೂರಿಗೆ ತೆರಳುತ್ತಿದ್ದ ವೇಳೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಟ್ವಾಳದ ಪುದು ಗ್ರಾಮದ 10 ನೇ ಮೈಲಿಗಲ್ಲು ತಲುಪಿದಾಗ ಚಾಲಕನ ನಿಯಂತ್ರಣ ಕಳೆದು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.ಬಳಿಕ ಪಲ್ಟಿಯಾಗಿದೆ.
ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ ಸುಮಾರು 9 ಮಂದಿಗೆ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದು ಎಲ್ಲರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಕಾಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.