ಹರೀಶ ಮಾಂಬಾಡಿ
ಕವಿಶಿಷ್ಯ ಹೆಸರಲ್ಲಿ ಪ್ರಸಿದ್ಧರಾಗಿದ್ದ, ನಾಗರಹಾವೇ ಹಾವೊಳು ಹೂವೆ ಹಾಡಿನ ಮೂಲಕ ಪರೋಕ್ಷವಾಗಿ ಬ್ರಿಟಿಷರ ದುರಾಡಳಿತ ವಿರುದ್ಧ ಕಹಳೆಯೂದಿದ್ದ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ ಮಂಗೇಶರಾಯರು ಹುಟ್ಟಿದ ಬಂಟ್ವಾಳದ ಅವರ ಮನೆ ಸನಿಹವೇ ಭವನವೊಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಪರ್ದಿಯಲ್ಲಿ ನಿರ್ಮಾಣವಾಗುತ್ತಿದೆ.
ನಿರ್ಮಾಣದ ಕೊನೇ ಹಂತದಲ್ಲಿರುವ ಈ ಕಟ್ಟಡ ಪೂರಕ ಅನುದಾನದ ಕೊರತೆಯಿಂದಾಗಿ ಇನ್ನೂ ಅಂತಿಮವಾಗಿಲ್ಲ.ಹೆಚ್ಚಿನ ಹಣಕಾಸಿನ ನೆರವಿನ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಪತ್ರವ್ಯವಹಾರಗಳು ನಡೆಯುತ್ತಿದ್ದು, ಅದಾದರೆ ಬಂಟ್ವಾಳದ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ದೊರಕಲಿದೆ.
ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ ೧೮೭೪ ಫೆಬ್ರುವರಿ ೨೨ರಂದು ಜನಿಸಿದರು. ಈಗ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರ ಕ್ವಾರ್ಟರ್ಸ್ ಇರುವ ಮನೆಯೇ ಪಂಜೆಯವರು ಹುಟ್ಟಿದ, ಬಾಳಿದ ಮನೆ. ಅಲ್ಲೇ ಸನಿಹ ಇರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕ ರೆವೆನ್ಯೂ ಇಲಾಖೆಯ ಕಚೇರಿ ಇದ್ದಲ್ಲಿ ಸರ್ವೆ ನಂಬ್ರ ೪೧/೧ಎ೧, ೧೪೨ ೧ಎ೨, ೧೪೨/೧ಎ೩ಯಲ್ಲಿ ಒಟ್ಟು ೫೧ ಸೆಂಟ್ಸ್ ಗೆ ಉದ್ದೇಶಿತ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣ ಆಗುತ್ತಿದೆ.
೨೦೧೭ರಲ್ಲಿ ಶಿಲಾನ್ಯಾಸವಾಗಿತ್ತು
೨೦೧೭ರಲ್ಲಿ ಸಚಿವರಾಗಿದ್ದ ಬಿ.ರಮಾನಾಥ ರೈ ನಿರ್ದೇಶನದ ಮೇರೆಗೆ ರೇಖಾ ಅಂದಾಜುಪಟ್ಟಿಯನ್ನು ಕರ್ನಾಟಕ ಗೃಹಮಂಡಳಿ ವತಿಯಿಂದ ತಯಾರಿಸಿ, ಆಡಳಿತ ಅನುಮೋದನೆಗೆ ನೀಡಲಾಗಿತ್ತು. ಆ ವರ್ಷ ಅಕ್ಟೋಬರ್ ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ೫ ಕೋಟಿ ರೂ ವೆಚ್ಚದ ಪ್ರಸ್ತಾಪಿತ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕೂ ಮೊದಲು ೨೦೦೭ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭ ಬಂಟ್ವಾಳದಲ್ಲಿ ಪಂಜೆ ಸ್ಮಾರಕ ನಿರ್ಮಾಣಕ್ಕೆ ೫೦ ಲಕ್ಷ ರೂ ಘೋಷಣೆ ಮಾಡಲಾಗಿತ್ತು. ಆದರೆ ಆಗ ಭವನಕ್ಕೆ ಸ್ಥಳ ನಿಗದಿಯಾಗಿರಲಿಲ್ಲ.
ಹುಟ್ಟಿದ ಮನೆ ಸರ್ಕಾರಿ ಆಸ್ಪತ್ರೆ ಉಪಯೋಗಕ್ಕೆ
ಪಂಜೆಯವರು ಹುಟ್ಟಿದ, ಬಾಳಿದ ಮನೆ ಈಗ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರ ವಸತಿಗೃಹವಾಗಿದೆ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಚನೆಯೂ ಇದೆ. ಸಾರ್ವಜನಿಕರ ಸೇವೆಗೆಂದು ಕವಿಯೊಬ್ಬರು ಹುಟ್ಟಿ, ಬೆಳೆದ ಮನೆಯನ್ನು ಸರಕಾರಕ್ಕೊಪ್ಪಿಸುವುದು ವಿರಳ ಸನ್ನಿವೇಶ. ಅಲ್ಲೇ ಪಕ್ಕದಲ್ಲಿ ಅಮೃತಶಿಲೆಯಲ್ಲಿ ಕೆತ್ತಿದ ಫಲಕವೊಂದು ನೆನಪಿಗಾಗಿ ಇದೆ.
==
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ:
ಪಂಜೆ ಮಂಗೇಶರಾಯರು. (ಜನನ:೧೮೭೪ ಫೆಬ್ರುವರಿ ೨೨, ನಿಧನ:೧೯೩೭ ಅಕ್ಟೋಬರ ೨೪ ) ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದು, ಅಧ್ಯಾಪಕರಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿ. ಶಿಶು ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದವರು. ಬಂಟವಾಳದಲ್ಲಿಯೇ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಪುಸ್ತಕಗಳನ್ನು ಸಂಪಾದಿಸಿದರು. ‘ ನಾಗರಹಾವೆ ಹಾವೊಳು ಹೂವೆ ‘-ಇವರ ಪ್ರಸಿದ್ಧ ಬಾಲಗೀತೆ, ಕವಿತೆಯು ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಕವಿತೆಯಾಗಿದೆ. ‘ ಅಣ್ಣನ ವಿಲಾಪ’ ಹೊಸಗನ್ನಡದ ಮೊಟ್ಟಮೊದಲ ಶೋಕಗೀತೆ. ಕನ್ನಡದಲ್ಲಿ ಮೊದಲ ಬಾರಿಗೆ ಕಥನಕವನಗಳನ್ನು ಬರೆದವರೂ ಪಂಜೆಯವರೆ. ಡೊಂಬರ ಚೆನ್ನ ಯು ಸ್ವತಂತ್ರವಾದ ಕಥನ ಕವನ, ರಂಗಸೆಟ್ಟಿ, ನಾಗಣ್ಣನ ಕನ್ನಡಕ, ಕಡೆಕಂಜಿ ಪ್ರಸಿದ್ಧ ಕಥನ ಕವನಗಳು. ೧೯೦೦ರಲ್ಲಿ ಪಂಜೆಯವರು ‘ನನ್ನ ಚಿಕ್ಕ ತಾಯಿ’ ಎಂಬ ಸಣ್ಣ ಕತೆ ಬರೆದಿದ್ದರು.
==
ಏನೇನಿದೆ?
ಬಂಟ್ವಾಳ ನೇತ್ರಾವತಿ ದಡದಲ್ಲಿ ಅರ್ಧ ಎಕರೆ ಜಾಗದಲ್ಲಿ ನಿರ್ಮಾಣ
ಪಂಜೆ ಅಧ್ಯಯನಾಸಕ್ತರಿಗೊಂದು ವೇದಿಕೆ
ರಂಗಚಟುವಟಿಕೆ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಕ್ಕೆ ಅವಕಾಶ
ಲೈಬ್ರರಿ, ವಿಶಾಲವಾದ ಸಭಾಂಗಣ, ಪಾರ್ಕಿಂಗ್ ವ್ಯವಸ್ಥೆ