ಬಂಟ್ವಾಳ:ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ನಿಷೇಧಿತ ‘ಮೆಥ್‌ಆಂಫಿಟಮೈನ್’ (Methamphetamine) ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಪೆಡ್ಲರ್ ಒಬ್ಬನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ 1.21 ಲಕ್ಷಕ್ಕೂ ಅಧಿಕ ರೂಪಾಯಿ ಮೌಲ್ಯದ ಸುಮಾರು 60.87 ಗ್ರಾಂ ತೂಕದ ಮಾದಕವಸ್ತು, ಕೃತ್ಯಕ್ಕೆ ಬಳಸಿದ್ದ ಆಕ್ಟಿವಾ ಸ್ಕೂಟರ್, ಡಿಜಿಟಲ್ ತೂಕ ಮಾಪಕ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಟಿ.ಕೆ. ಫ್ಲಾಟ್ ನಿವಾಸಿ ಅಶ್ರಫ್ ಯಾನೆ ಮೊಹಮ್ಮದ್ ಅಶ್ರಫ್ (48) ಬಂಧಿತ ಆರೋಪಿ.
ಬ್ರಹ್ಮರಕೂಟ್ಲು ಸರ್ವಿಸ್ ರಸ್ತೆಯಲ್ಲಿ ಕಾರ್ಯಾಚರಣೆ:
ಅಕ್ಟೋಬರ್ 8 ಮಧ್ಯಾಹ್ನ ಸುಮಾರು 3:55ರ ವೇಳೆಗೆ ಕಳ್ಳಿಗೆ ಗ್ರಾಮದ ಟೋಲ್‌ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಕಪ್ಪು ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟಕ್ಕೆ ನಿಂತಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು.
ಖಾಸಗಿ ವಾಹನದಲ್ಲಿ ಸಿಬ್ಬಂದಿಯೊಂದಿಗೆ ಬಿ.ಸಿ.ರೋಡ್, ಕೈಕಂಬ, ತಲಪಾಡಿಯಾಗಿ ಚಲಿಸಿದ ಪೊಲೀಸರು, ತಲಪಾಡಿ ಮಸೀದಿ ಪಕ್ಕದ ಬ್ರಹ್ಮರಕೂಟ್ಲು ಸರ್ವಿಸ್ ರಸ್ತೆಯತ್ತ ತೆರಳಿದರು. ಬ್ರಹ್ಮರ ಸನ್ನಿಧಿ ದೈವಸ್ಥಾನದಿಂದ ಸುಮಾರು 50 ಮೀಟರ್ ದೂರದಲ್ಲಿ ಕಪ್ಪು ಆಕ್ಟಿವಾ ಸ್ಕೂಟರ್ ಪಕ್ಕ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದಾಗ ಆತನನ್ನು ಸುತ್ತುವರಿದು ವಶಕ್ಕೆ ಪಡೆಯಲಾಯಿತು.
ಪ್ಯಾಂಟ್ ಕಿಸೆ ಮತ್ತು ಸ್ಕೂಟರ್ ಸೀಟ್‌ನಲ್ಲಿದ್ದ ಡ್ರಗ್ಸ್:
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಗಿರಾಕಿಗಳಿಗೆ ಮಾರಾಟ ಮಾಡಲು ಮಾದಕವಸ್ತುವನ್ನು ತನ್ನ ಪ್ಯಾಂಟ್ ಕಿಸೆಯಲ್ಲಿ ಹಾಗೂ ಸ್ಕೂಟರ್ ಸೀಟ್ ಅಡಿಯಲ್ಲಿ ಇರಿಸಿಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಆರೋಪಿ ಧರಿಸಿದ್ದ ಜೀನ್ಸ್ ಪ್ಯಾಂಟ್‌ನ ಎಡ ಕಿಸೆಯಲ್ಲಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಒಟ್ಟು 4 ಝಿಪ್ ಲಾಕ್ ಪ್ಯಾಕೆಟ್‌ಗಳಲ್ಲಿ ಬಿಳಿ ಬಣ್ಣದ ಸಕ್ಕರೆಯ ಹರಳುಗಳಂತಿದ್ದ 8.31 ಗ್ರಾಂ ತೂಕದ ‘ಮೆಥ್’ ಡ್ರಗ್ಸ್, ವಿವೋ ಮತ್ತು ರೆಡ್ಮಿ ಕಂಪೆನಿಯ 2 ಮೊಬೈಲ್ ಫೋನ್‌ಗಳು, ಎಸ್‌ಬಿಐ ಡೆಬಿಟ್ ಕಾರ್ಡ್ ಹಾಗೂ ₹1,870 ನಗದು ಪತ್ತೆಯಾಗಿದೆ.
ಆಕ್ಟಿವಾ ವಾಹನದ ಸೀಟ್ ತೆರೆದು ಪರಿಶೀಲಿಸಿದಾಗ, ಪಿಂಕ್ ಬಣ್ಣದ ಕವರ್‌ನಲ್ಲಿದ್ದ 5 ಝಿಪ್ ಲಾಕ್ ಪ್ಯಾಕೆಟ್‌ಗಳಲ್ಲಿ ತಲಾ 10 ಗ್ರಾಂ ಹಾಗೂ 12.5 ಗ್ರಾಂ ತೂಕದ ಒಟ್ಟು 52.63 ಗ್ರಾಂ ಮೆಥ್‌ಆಂಫಿಟಮೈನ್, 8 ಖಾಲಿ ಝಿಪ್ ಲಾಕ್ ಕವರ್‌ಗಳು ಮತ್ತು ಡ್ರಗ್ಸ್ ತೂಕ ಮಾಡಲು ಬಳಸುತ್ತಿದ್ದ ‘AUTOM’ ಡಿಜಿಟಲ್ ತೂಕ ಮಾಪಕ ಸಿಕ್ಕಿಬಿದ್ದಿದೆ.
ಸ್ಥಳದಲ್ಲೇ ಪ್ರಾಥಮಿಕ ಪರೀಕ್ಷೆ – ಎನ್‌ಡಿಪಿಎಸ್ ಕೇಸ್ ದಾಖಲು:
ಸ್ಥಳಕ್ಕೆ ಆಗಮಿಸಿದ ಸೋಕೋ (SOCO) ಅಧಿಕಾರಿಗಳು ತಮ್ಮಲ್ಲಿದ್ದ ಜನರಲ್ ಸ್ಕ್ರೀನಿಂಗ್ ಕಿಟ್ ಮೂಲಕ ಪರೀಕ್ಷೆ ನಡೆಸಿದಾಗ, ವಶಪಡಿಸಿಕೊಂಡ ಬಿಳಿ ಹರಳುಗಳು ನಿಷೇಧಿತ ಆಂಫಿಟಮೈನ್/ಮೆಥ್‌ಆಂಫಿಟಮೈನ್ ಎಂದು ದೃಢಪಟ್ಟಿದೆ.
ವಶಪಡಿಸಿಕೊಂಡ ಒಟ್ಟು ಸೊತ್ತಿನ ವಿವರ ಹೀಗಿದೆ:
* ಮಾದಕವಸ್ತು: 60.87 ಗ್ರಾಂ ಮೆಥ್‌ಆಂಫಿಟಮೈನ್ (ಅಂದಾಜು ಮೌಲ್ಯ: ₹1,21,740)
ವಾಹನ: ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್ (ಅಂದಾಜು ಮೌಲ್ಯ: ₹60,000)
ಇತರೆ: 2 ಮೊಬೈಲ್ ಫೋನ್‌ಗಳು (ಮೌಲ್ಯ: ₹10,000), ನಗದು ₹1,870 ಹಾಗೂ ಡಿಜಿಟಲ್ ತೂಕ ಮಾಪಕ.
(ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ ₹1,93,610 ಎಂದು ಅಂದಾಜಿಸಲಾಗಿದೆ).
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮಾದಕವಸ್ತು ಜಾಲದ ಮೂಲ ಹಾಗೂ ಗಿರಾಕಿಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)