\
ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಬಂಟ್ವಾಳ ವಲಯದ ರಜತ ಸಂಭ್ರಮ ಕಾರ್ಯಕ್ರಮ, ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಕಾರ್ಯಕ್ರಮ ಮೇ 24ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.
ಪೂರ್ವಾಧ್ಯಕ್ಷ ಹಾಗೂ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ವಿವರ ನೀಡಿದರು.
ಬೆಳಗ್ಗೆ 9.30ಕ್ಕೆ ಪದಗ್ರಹಣ ಸಮಾರಂಭವು ಆರಂಭವಾಗಲಿದ್ದು, ಸಂಜೆ 6ರಿಂದ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಬಳಿಕ ಶಿವದೂತೆ ಗುಳಿಗೆ ಕಾರ್ಯಕ್ರಮ ರೋನಿ ಫೆರ್ನಾಂಡೀಸ್ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಸಂಜೆಯ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿಯೋಜಿತ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ವಹಿಸಲಿದ್ದು, ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಪ್ರಮುಖರು ಭಾಗವಹಿಸುವರು. 160 ಸದಸ್ಯರು ಇರುವ ಸಂಘ ಕಳೆದ ಹದಿನೈದು ವರ್ಷಗಳಿಂದ ಆರೋಗ್ಯ ತಪಾಸಣೆ, ರಕ್ತದಾನ, ವನಮಹೋತ್ಸವ ಸಹಿತ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದು, ಪ್ರತಿ ವರ್ಷ ಸದಸ್ಯರ ಹಾಗೂ ಇತರರ ಮನವಿ ಮೇರೆಗೆ ಧನಸಹಾಯ ನೀಡಲಾಗುತ್ತಿದೆ. ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ನೆರವು, ಸಾಧಕರ ಸನ್ಮಾನ ಮಾಡಲಾಗುತ್ತಿದೆ. ಪ್ರತಿ ವಾರ ಪಿಗ್ಮಿ ಯೋಜನೆಯಲ್ಲಿ ಹಣ ತೊಡಗಿಸಿ, ಸಂಘದ ಆರ್ಥಿಕತೆ ಗಟ್ಟಿಗೊಳಿಸಲಾಗುತ್ತಿದ್ದು, ಈಗಾಗಲೇ ಬಿ.ಸಿ.ರೋಡಿನಲ್ಲಿ ಜಾಗ ಖರೀದಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸುಧೀರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಲಾಲ್, ಗೌರವ ಸಲಹೆಗಾರರಾದ ವಿಶ್ವನಾಥ ಬಿ, ಸಂಘಟನಾ ಸಂಚಾಲಕ ಗಣೇಶ್ ಸುವರ್ಣ ತುಂಬೆ , ಕೋಶಾಧಿಕಾರಿ ಭಾಸ್ಕರ ಕುಲಾಲ್, ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.