ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾತಿ ಆಂದೋಲನ ಮೇ 28ರವರೆಗೆ ನಡೆಯಲಿದೆ. ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನಕ್ಕೆ ಸಂಬಂಧಿಸಿದಂತೆ ವಲಯದಲ್ಲಿ ಬ್ಲಾಕ್ ಮಟ್ಟ, ಹೋಬಳಿ ಮಟ್ಟ, ಕ್ಲಸ್ಟರ್ ಮಟ್ಟದಲ್ಲಿ ಆಂದೋಲನ ಮಾಡಲಾಗುತ್ತಿದೆಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಕಳೆದ ನವೆಂಬರ್ ತಿಂಗಳಿಂದಲೇ ದಾಖಲಾತಿ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಶಿಕ್ಷಕರ, ಪೋಷಕರ, ಎಸ್.ಡಿ.ಎಂ.ಸಿ. ಸಭೆಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಶಾಲಾ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಒಂದನೇ ತರಗತಿಗೆ ದಾಖಲಾಗುವ ವಯೋಮಾನದ ಮಕ್ಕಳ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಬಂಟ್ವಾಳ ವಲಯದಲ್ಲಿ 42 ಕಿರಿಯ, 152 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 39 ಪ್ರೌಢ ಶಾಲೆಗಳು ಸೇರಿ ಒಟ್ಟು 233 ಶಾಲೆಗಳಿವೆ. 2025-26ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 16 ಸರಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ. ಈಗಾಗಲೇ ತಾಲೂಕಿನ ಮೂರು ಶಾಲೆಗಳಲ್ಲಿ ಸರಕಾರದ ವತಿಯಿಂದಲೇ ಎಲ್.ಕೆ.ಜಿ, ಯು.ಕೆ.ಜಿ. ಆರಂಭಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 60 ಶಾಲೆಗಳಿಗೆ ಎಲ್.ಕೆ.ಜಿ. ತರಗತಿ ಮಂಜೂರಾಗಿದೆ. ಇವುಗಳಲ್ಲಿ 28 ಶಾಲೆಗಳಿಗೆ 1 ಲಕ್ಷ ರೂ ತಲಾ ಅನುದಾನ ಬಿಡುಗಡೆ ಆಗಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಈ ವರ್ಷ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಮಾಹಿತಿ ನೀಡಿದರು.
ತಾಲೂಕಿನಲ್ಲಿ ವಾಮದಪದವು, ಕುರ್ನಾಡು, ಕನ್ಯಾನ, ಸಿದ್ಧಕಟ್ಟೆಗಳಲ್ಲಿ ನ್ಯಾಶನಲ್ ಸ್ಕಿಲ್ ಕ್ವಾಲಿಫಿಕೇಶನ್ ಫ್ರೇಮ್ ವರ್ಕ್ ಶಾಲೆಗಳಿವೆ. ಇಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಒದಗಿಸಲಾಗುತ್ತದೆ. ಕಲಿಕೆ, ಉದ್ಯೋಗ ಸಿದ್ಧತೆ ಹಾಗೂ ವಿಭಿನ್ನ ವೃತ್ತಿಪರ ಕಲಿಕೆಗಳಿಗೆ ಇದು ಅನುಕೂಲಕರವಾಗಿದೆ. ಬಂಟ್ವಾಳ ವಲಯದಲ್ಲಿ 6 ಪಿಎಂಶ್ರೀ ಶಾಲೆಗಳಿವೆ. ಇವು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮೇಲ್ದರ್ಜೆಗೇರಿಸಲಾದ ಶಾಲೆಗಳಾಗಿವೆ ಎಂದವರು ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ ಸರಕಾರಿ ಶಾಲೆಗಳಿಂದು ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಹೊಂದಿದೆ. ದಾಖಲಾತಿ ಆಂದೋಲನದ ಮೂಲಕ ಪೋಷಕರು ಶಾಲೆ ಸೇರ್ಪಡೆಗೆ ಗಮನಹರಿಸಬೇಕು ಎಂದರು.ಬಿ.ಆರ್.ಸಿ. ವಿದ್ಯಾ ಜಿಲ್ಲಾ ವಯಸ್ಕರ ಶಿಕ್ಷಣ ಸಮನ್ವಯಾಧಿಕಾರಿ ಫಾತಿಮಾ ಬಿ, ಪೂರಕ ಮಾಹಿತಿ ನೀಡಿ ವಿವರಗಳನ್ನು ಒದಗಿಸಿದರು.ಇಸಿಒಗಳಾದ ರಮಾನಂದ ನೂಜಿಪ್ಪಾಡಿ, ಸುಧಾ ಮತ್ತು ಪ್ರತಿಮಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.