ಗಾಳಿ, ಮಳೆಯಿಂದ ಬಂಟ್ವಾಳ ತಾಲೂಕಿನ ಕೆಲವೆಡೆ ಹಾನಿ ಸಂಭವಿಸಿದೆ. ನರಿಕೊಂಬು ಗ್ರಾಮದಲ್ಲಿ ಮನೆ ಹಾಗೂ ಅಡಿಕೆ ತೋಟಕ್ಕೆ ಹಾನಿಯಾಗಿದೆ.
ನರಿಕೊಂಬು ಗ್ರಾಮದ ಕಲ್ಯಾಣ ಅಗ್ರಾರ ಎಂಬಲ್ಲಿ ಉಮೇಶ್ ಪೂಜಾರಿ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದ ತೀವ್ರ ಹಾನಿಯಾಗಿದೆ. ಮತ್ತೊಂದೆಡೆ ಇಲ್ಲಿನ ಪೊಯಿತ್ತಾಜೆ ಎಂಬಲ್ಲಿ ಫೆಲಿಕ್ಸ್ ಡಿಸಿಲ್ವ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿದೆ. ಇದೇ ಪ್ರದೇಶದ ನಾರಾಯಣ ಸಪಲ್ಯ ಅವರ ಅಡಿಕೆ ತೋಟಕ್ಕೂ ಗಾಳಿ ಮಳೆಯಿಂದ ಹಾನಿಯಾಗಿದೆ. ನರಿಕೊಂಬು ಗ್ರಾಮದ ಕಲ್ಯಾಣ ಅಗ್ರಾರ ಎಂಬಲ್ಲಿ ಸಂಜೀವ ಪೂಜಾರಿ ಅವರ ವಾಸ್ತವ್ಯದ ಪಕ್ಕಾ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ.
ಬಾಳ್ತಿಲ ಗ್ರಾಮದ ಸುಧೆಕಾರು ನಡುಮನೆಯ ಜಯಂತಿ ಶೆಟ್ಟಿ ಇವರ ಮನೆಯ ಮೇಲೆ ಮರ ಬಿದ್ದು ಟ್ಯಾಂಕ್ ಹಾನಿಯಾಗಿ, ಹಂಚುಗಳು ಹುಡಿಯಾಗಿವೆ. ಬಾಳ್ತಿಲ ಗ್ರಾಮದ ಕಶೆಕೋಡಿಯ ಆನಂದ ಗೌಡ ಮನೆಯ ಅಂಗಳಕ್ಕೆ ಆಲದ ಮರ ಬಿದ್ದಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.