ಮೆಸ್ಕಾಂ ಬಂಟ್ವಾಳ 1 ಹಾಗೂ ಬಂಟ್ವಾಳ 2 ಉಪವಿಭಾಗಗಳಿಗೆ ಸಂಬಂಧಿಸಿದಂತೆ ಜನರ ಅಹವಾಲು ಆಲಿಸುವ ಜನಸಂಪರ್ಕ ಸಭೆ ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ನಡೆಯಿತು.
ಮಳೆಗಾಲದ ಸಂದರ್ಭ, ಮೆಸ್ಕಾಂ ವತಿಯಿಂದ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ವಿದ್ಯುತ್ ಮೀಟರ್ ರೀಡಿಂಗ್ ಹಾಗೂ ವಿದ್ಯುತ್ ಬಿಲ್ ನೀಡುವ ವಿಳಂಬದ ಬಗ್ಗೆ ಕೆಲವರು ಸಭೆಯಲ್ಲಿ ಆಕ್ಷೇಪಿಸಿದರು. ಹೊಸ ವಿದ್ಯುತ್ ಸಂಪರ್ಕ ಪಡೆಯುವ ವೇಳೆಯಲ್ಲಿ ಸರ್ವರ್ ಸಮಸ್ಯೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವವಾಯಿತು. ವಿದ್ಯುತ್ ಗುತ್ತಿಗೆದಾರರು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ಮಂಡಿಸಿದರು. ರಾಜ್ಯ ಮಟ್ಟದಲ್ಲಿ ಆಗಬೇಕಾದ ಪರಿಹಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಹಾಗೂ ಸ್ಥಳೀಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ತಿಳಿಸಿದರು. ಮೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಂತೋಷ್ ನಾಯಕ್, ಎಇಇ ಗಳಾದ ನಾರಾಯಣ ಭಟ್, ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.