ಬಂಟ್ವಾಳ

ಮತದಾನ: ವಿಕಲಚೇತನರ ಕುರಿತು ವಿಶೇಷ ಕಾಳಜಿ

1995ರ ವಿಕಲಚೇತನ ಕಾಯ್ದೆ ಕಲಂ 40ರ ಪ್ರಕಾರ ಪ್ರತಿಯೊಬ್ಬ ವಿಕಲಚೇತನರಿಗೂ ಕಾನೂನಿನಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ವಿಕಲಚೇತನರ ಹೆಸರು ಸೇರ್ಪಡೆಗೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಚುನಾವಣಾ ಆಯೋಗ ಆದೇಶದಂತೆ ವಿಶೇಷ ಕಾಳಜಿ ವಹಿಸಿದೆ ಎಂದು ಜಿಲ್ಲಾ ವಿಕಲಚೇತನರು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಶಿವಪ್ಪ ರಾಥೋಡ್ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಪರವಾಗಿ ಬುಧವಾರ ತಾಲೂಕಿನ ವಿಕಲಚೇತನರು ಮತ್ತು ಅವರ ಪೋಷಕರಿಗಾಗಿ ಮತದಾನ ಜಾಗೃತಿ ಕುರಿತು ನಡೆಸಲಾದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ವಿಕಲಚೇತನರು ಮತದಾನ ಕೇಂದ್ರಕ್ಕೆ ಮನೆಯಿಂದ ಹೋಗಿಬರಲು ಸ್ವಯಂಸೇವಕರನ್ನು ಹಾಗೂ ಕುರುಡರಿಗೆ ಮತದಾನ ಯಂತ್ರದ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಒತ್ತಡ, ಆಮಿಷಕ್ಕೆ ಒಳಗಾಗದೆ ತನ್ನ ಒಂದು ಮತದಿಂದ ಏನಾಗುತ್ತದೆ ಎಂಬ ತಾತ್ಸಾರ ತಾಳದೆ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ವಿಆರ್ ಡಬ್ಲು ಅವರು ಪ್ರತಿದಿನ ಕಡ್ಡಾಯವಾಗಿ ಗ್ರಾಪಂ ಕಚೇರಿಯಲ್ಲಿ ಹಾಜರಿರಬೇಕು. ವಿಕಲಚೇತನರು ಮತದಾನ ಮಾಡಲು ಸರದಿಯಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಮತದಾನ ಕೇಂದ್ರಗಳು ವಿಕಲಚೇತನ ಸ್ನೇಹಿ ಕೇಂದ್ರಗಳಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.

ಮತದಾರರಪಟ್ಟಿಯಲ್ಲಿ ವಿಕಲಚೇತನರ ಹೆಸರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ,ಸ್ವೀಪ್ ಸಮಿತಿ ವಿಶೇಷ ಕಾಳಜಿ ವಹಿಸಿದೆ ಎಂದ ಅವರು,ವಿಕಲಚೇತನರು ಮತದಾನ ಕೇಂದ್ರಕ್ಕೆ ಹೋಗಿ ಬರಲು ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತಿದೆ ಎಂದರು.

ಜಿಪಂ ಉಪಕಾರ್ಯದರ್ಶಿ, ಬಂಟ್ವಾಳ ಕ್ಷೇತ್ರ ಚುನಾವಣಾಧಿಕಾರಿ ರವಿ ಬಸರಿಹಳ್ಳಿ ಮಾತನಾಡಿ ಮತದಾನ ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದ್ದು, ನಿರ್ಭಿತಿಯಿಂದ ಯಾವುದೇ ಅಮಿಷಕ್ಕೊಳಗಾಗದೆ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದರು.

ಬಂಟ್ವಾಳ ತಾಪಂ ಕಾರ್ಯನಿರ್ವಣಾಧಿಕಾರಿ ರಾಜಣ್ಣ ಅವರು ಮಾತನಾಡಿ 18 ವರ್ಷ ತುಂಬಿದ ಪ್ರತಿಯೊಬ್ಬರು 2018 ರ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸಬೇಕು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಾಗಿರುವ ಬಗ್ಗೆಯು ಖಚಿತಪಡಿಸಬೇಕು, ಹೆಸರು ಸೇರ್ಪಡೆಗೆ  ಏ.12 ರ ತನಕ ಅವಕಾಶವಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ 2018 ಚುನಾವಣೆಯಲ್ಲಿ ಮತದಾನಮಾಡುವುದಾಗಿ ಪ್ರಮಾಣ ವಚನ ಬೋಧಿಸಲಾಯಿತು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.