ಅತ್ಯಂತ ಗ್ರಾಮೀಣ ಭಾಗದವಾದ ಪುಣಚ ಭಾಗದಲ್ಲಿನ ಬಡ ಮಕ್ಕಳೇ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಶಾಲೆಗೆ ವೈಯಕ್ತಿಕ ಹಗೆತನವನ್ನಿಟ್ಟುಕೊಂಡು ಶಾಲಾ ಮಕ್ಕಳ ಊಟಕ್ಕೆ ಕೊಲ್ಲೂರಿನಿಂದ ಬರುತ್ತಿದ್ದ ಅನುದಾನವನ್ನು ಸ್ಥಗಿತಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹರಿಪ್ರಸಾದ್ ಯಾದವ್ ಹೇಳಿದರು.
ಬುಧವಾರ ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಅಡ್ಯನಡ್ಕ ಬ್ರಿಗೇಡ್ ಬ್ರದರ್‍ಸ್ ಸದಸ್ಯರು ಒಟ್ಟಾಗಿಸಿದ ಅಕ್ಕಿಯನ್ನು ಹಸ್ತಾಂತರಿಸಿ ಮಾತನಾಡಿದರು.
ಯುವಕರು, ಉದ್ಯಮಿಗಳು, ಧಾರ್ಮಿಕ ಕೇಂದ್ರದ ಹಿರಿಯರು ಒಟ್ಟಾಗಿ ಸೇರಿಕೊಂಡು ಸುಮಾರು 3 ಕ್ವಿಂಟಾಲ್ 60 ಕೆಜಿ ಅಕ್ಕಿಯನ್ನು ದೇವಿನಗರ ಶಾಲೆಗೆ ಕೊಡುತ್ತಿದ್ದೇವೆ ಎಂದು ಹೇಳಿದರು.
ಶ್ರೀದೇವಿ ವಿದ್ಯಾಕೇಂದ್ರದ ಸಂಚಾಲಕ ಜಯಶ್ಯಾಮ ನೀರ್ಕಜೆ ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷದ ಅನುದಾನ ಈವರೆಗೆ ಸಿಕ್ಕಿಲ್ಲ ಎಂದು ತಿಳಿಸಿದರು.
ಪುಣಚ ಪ್ರಾಥಮಿಕ ವ್ಯವಸಾಯ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ, ಶಾಲಾ ಆಡಳಿತ ಮಂಡಳಿಯ ಶಂಕರನಾರಾಯಣ ಮಲ್ಯ, ಸುಬ್ಬ ನಾಯ್ಕ, ಉದ್ಯಮಿ ರವಿಪ್ರಸಾದ್, ಕಾರ್ತಿಕ ರೈ, ದಯಾನಂದ, ಗಣೇಶ್, ಜಯೇಶ್ ಹಾಗೂ ಬ್ರಿಗೇಡ್ ಬ್ರದರ್‍ಸ್ ಸದಸ್ಯರು ಹಾಜರಿದ್ದರು. ಹಿರಿಯ ಶಿಕ್ಷಕಿ ಗಂಗಮ್ಮ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲೋಕೇಶ್ ವಂದಿಸಿದರು.