ಬಂಟ್ವಾಳ

ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯಶಸ್ವಿ ‘ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್’ ಶಸ್ತ್ರಚಿಕಿತ್ಸೆ

ಬಂಟ್ವಾಳ: ತೀವ್ರ ಸೊಂಟದ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಅತ್ಯಂತ ಕ್ಲಿಷ್ಟಕರವಾದ ಲೆಫ್ಟ್ ಟೋಟಲ್ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯನ್ನು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿಸುವ ಮೂಲಕ ಬಂಟ್ವಾಳ ಸರಕಾರಿ ಆಸ್ಪತ್ರೆ ತನ್ನ ಸೇವಾ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಇದೇ ಪ್ರಥಮ ಬಾರಿ ಈ ರೀತಿಯ ಶಸ್ತ್ರಚಿಕಿತ್ಸೆ ನಡೆದಿದೆ.

VNR GOLD

ಹಿನ್ನೆಲೆ: ಬಂಟ್ವಾಳ ತಾಲೂಕಿನ 41 ವರ್ಷದ ವ್ಯಕ್ತಿಯೊಬ್ಬರು ಕಳೆದ 8 ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದಾಗ ಅವರಿಗೆ ‘ಬೈಲ್ಯಾಟರಲ್ ಹಿಪ್ ಅವಾಸ್ಕುಲರ್ ನೆಕ್ರೋಸಿಸ್’ ಕಾಯಿಲೆ ಇರುವುದು ಪತ್ತೆಯಾಗಿದ್ದು, ಬಲಭಾಗಕ್ಕಿಂತ ಎಡಭಾಗದ ಸೊಂಟವು ತೀವ್ರವಾಗಿ ಹಾನಿಗೊಳಗಾಗಿತ್ತು. ಈ ಹಿಂದೆ ವೆನ್ಲಾಕ್ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಮೂಳೆ ತಜ್ಞರನ್ನು ಸಂಪರ್ಕಿಸಿದ್ದಾಗ, ಶಸ್ತ್ರಚಿಕಿತ್ಸೆಯೊಂದೇ ಇದಕ್ಕೆ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದರು. ಸ್ಥಳೀಯರಾದ ವೃಂದಾ ಅವರ ಸಹಕಾರದೊಂದಿಗೆ ರೋಗಿಯು ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು.

ಜಾಹೀರಾತು

ಸಕಾಲದಲ್ಲಿ ಚಿಕಿತ್ಸೆ:

ರೋಗಿಯ ಪರಿಸ್ಥಿತಿಯನ್ನು ಗಮನಿಸಿದ ವೈದ್ಯರು ಎಬಿ-ಎಆರ್‌ಕೆ ಯೋಜನೆಯಡಿ ಎಡ ಸೊಂಟ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು. ನವೆಂಬರ್ 4 ರಂದು ಯೋಜನೆಗೆ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್ 11 ರಂದು ಅನುಮೋದನೆ ದೊರೆತಿತ್ತು. ಬಳಿಕ ನವೆಂಬರ್ 17 ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಯಿತು.

ವೈದ್ಯಕೀಯ ತಂಡ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಆವರ ಮಾರ್ಗದರ್ಶನದಲ್ಲಿ ಮಾರ್ಗದರ್ಶಕ ಶಸ್ತ್ರಚಿಕಿತ್ಸಕರಾಗಿ ಡಾ. ಅಭಿಷೇಕ್ ಶೆಟ್ಟಿ ಹಾಗೂ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಚೇತನ್‌ರಾಜ್ ಅವರ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಯಿತು. ಅರವಳಿಕೆ ತಜ್ಞರಾದ ಡಾ. ವಿದ್ಯಾಸಾಗರ್ ಮತ್ತು ಡಾ. ತುಷಾರ್ ಕೆ., ಶಸ್ತ್ರಚಿಕಿತ್ಸಾ ವಿಭಾಗದ ಶುಶ್ರೂಷಾಧಿಕಾರಿಗಳಾದ ವಾಣಿ, ಪುಷ್ಪಾ, ಕೀರ್ತಿಶಾಲಿನಿ, ತಂತ್ರಜ್ಞರಾದ ಧನ್ಯಾ, ಶಶಿಕಲಾ ಹಾಗೂ ಡಿ-ದರ್ಜೆ ನೌಕರರಾದ ಸವಿತಾ, ಜಲಜಾ ಮತ್ತು ಚಂದ್ರಾವತಿ ಅವರು ಈ ಯಶಸ್ವಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದಾಗಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ತಿಳಿಸಿದ್ದಾರೆ.. ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಾದ ಈ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆಗೆ ರೋಗಿಯ ಕುಟುಂಬಸ್ಥರು ಮತ್ತು ಸಾರ್ವಜನಿಕರು ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts