ಮಕ್ಕಳಿಗೆ ಸ್ವತಂತ್ರವಾಗಿ ಯೋಚಿಸಲು, ಹೊಸ ವಿಷಯಗಳನ್ನು ಕಲಿಯಲು ಹಾಗೂ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮುಕ್ತ ಅವಕಾಶ ನೀಡಬೇಕು ಎಂದು ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ. ಗಾಯತ್ರಿ ಇ. ಪ್ರಕಾಶ್ ಹೇಳಿದರು.
ವೀರಕಂಭದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಯುವವಾಹಿನಿ ಅಧ್ಯಕ್ಷ ಕಿರಣ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಮೊದಲು ಗುರುತಿಸುವವರು ತಂದೆ-ತಾಯಿ ಹಾಗೂ ಶಿಕ್ಷಕರು. ಪೋಷಕರು ತಮ್ಮ ಆಸೆ, ಕನಸುಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತದೆ. ಬದಲಾಗಿ, ಅವರ ಸಣ್ಣ ಸಾಧನೆಯನ್ನೂ ಮೆಚ್ಚಿ ಮುಂದಿನ ಸಾಧನೆಗೆ ಪ್ರೇರಣೆ ನೀಡಬೇಕು. ತಪ್ಪು ಮಾಡಿದಾಗ ಬೈಯುವ ಬದಲು ತಿದ್ದಿ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ವಹಿಸಿದ್ದರು. ಕೆಲಿಂಜ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹಿತ್ ಶೆಟ್ಟಿ ಮಾತನಾಡಿ, “ಕೆಲಿಂಜ ಶಾಲೆಯಲ್ಲಿ ಪ್ರತಿಭಾ ಕಾರಂಜಿಯನ್ನು ವಿಜೃಂಭಣೆಯಿಂದ ನಡೆಸುವ ಕನಸಿತ್ತು. ಆದರೆ, ದುರದೃಷ್ಟವಶಾತ್ ನಮ್ಮ ಮುಖ್ಯ ಶಿಕ್ಷಕಿಯವರನ್ನು ಕಳೆದುಕೊಂಡ ನೋವಿನಲ್ಲಿದ್ದಾಗ, ಮಜಿ ಶಾಲೆಯವರು ಆ ಜವಾಬ್ದಾರಿಯನ್ನು ವಹಿಸಿಕೊಂಡು ದಿವಂಗತ ಮುಖ್ಯ ಶಿಕ್ಷಕಿಯ ಗೌರವಾರ್ಥ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿರುವುದು ಅಭಿನಂದನೀಯ,” ಎಂದರು.
ವೀರಕಂಭ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ದಿನೇಶ್, ಪಿಡಿಒ ಶಂಭು ಕುಮಾರ್ ಶರ್ಮ, ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಕೆಲಿಂಜ ಶಾಲಾ ನಿಕಟಪೂರ್ವ ಅಧ್ಯಕ್ಷ ಹಮೀದ್, ಬಂಟ್ವಾಳ ತಾಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುರ್ಚಿಗುಡ್ಡೆ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಸುಕುಮಾರ್ ಬಂಟ್ವಾಳ, ಎಸ್‌ಡಿಎಂಸಿ ಉಪಾಧ್ಯಕ್ಷೆ ಗಾಯತ್ರಿ, ಶಾಲಾ ನಾಯಕ ಮಹಮ್ಮದ್ ಹಾರೂನ್ ಫರ್ಹಾನ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಬಿಐಆರ್‌ಟಿ ಸುರೇಖಾ ಯಳವರ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ ವೈ.ವಿ, ಪ್ರಭಾರ ಸಮನ್ವಯಾಧಿಕಾರಿ ವಿದ್ಯಾ ಭೇಟಿ ನೀಡಿದರು.
ಗಮನ ಸೆಳೆದ ಪರಿಸರ ಜಾಗೃತಿ, ಮಿನಿ ಲೈಬ್ರರಿ: ಉದ್ಘಾಟನಾ ಸಮಾರಂಭದ ಬಳಿಕ ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಸುಮಾರು 300 ವಿದ್ಯಾರ್ಥಿಗಳು ಪಾಲ್ಗೊಂಡರು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ನಿರ್ಮಿಸಲಾಗಿದ್ದ ಆಕರ್ಷಕ ‘ಸೆಲ್ಫಿ ಕಾರ್ನರ್’ ಹಾಗೂ ಓದುವ ಹವ್ಯಾಸ ಪ್ರೋತ್ಸಾಹಿಸಲು ಶಾಲಾ ಆವರಣದಲ್ಲಿ ನಿಲ್ಲಿಸಲಾಗಿದ್ದ ‘ಮಿನಿ ಲೈಬ್ರರಿ ರಿಕ್ಷಾ’ ವಿಶೇಷ ಗಮನ ಸೆಳೆಯಿತು.
ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಇಂದುಶೇಖರ್ ವಂದಿಸಿದರು. ಶಿಕ್ಷಕ ತೌಸೀಫ್ ಅಹ್ಮದ್ ಹಾಗೂ ಹಿರಿಯ ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.
| 14ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಂದ ಪ್ರಶಸ್ತಿ ಸ್ವೀಕಾರ (more…)
(more…)
(more…)