POSITIVE REPORT
ಮಗುವಿನ ಮೊದಲ ಅಕ್ಷರ, ಮೊದಲ ಗೆಳೆತನ, ಮೊದಲ ಹಾಡು, ಮೊದಲ ಆಟ… ಇವೆಲ್ಲವೂ ಅದರ ಬಾಲ್ಯದ ಅಮೂಲ್ಯ ನೆನಪುಗಳು. ಇಂತಹ ನೆನಪುಗಳಿಗೆ ಸುಂದರ ವಾತಾವರಣ ಒದಗಿಸುವ ಮೂಲಕ ಅಂಗನವಾಡಿಯ ಪರಿಕಲ್ಪನೆಗೆ ಹೊಸ ಅರ್ಥ ನೀಡುವ ಪ್ರಯತ್ನ ಬಂಟ್ವಾಳದಲ್ಲಿ ನಡೆಯುತ್ತಿದೆ.
ಅಂಗನವಾಡಿ ಎಂದರೆ ಕೇವಲ ಪೌಷ್ಟಿಕ ಆಹಾರ ಮತ್ತು ಅಕ್ಷರಾಭ್ಯಾಸದ ಕೇಂದ್ರವಲ್ಲ; ಮಗುವಿನ ನಗು, ಆಟ, ಕುತೂಹಲ ಮತ್ತು ಸೃಜನಶೀಲತೆಗೆ ವೇದಿಕೆಯಾಗಬೇಕು ಎಂಬ ಚಿಂತನೆಗೆ ಬಂಟ್ವಾಳ ತಾಲೂಕಿನ ಎಲ್ಪೇಲಿನ ಮಾದರಿ ಅಂಗನವಾಡಿ ಸಾಕ್ಷಿಯಾಗುತ್ತಿದೆ.
ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಎಂಬಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೂಲಕ ನಿರ್ಮಿಸಲಾಗಿರುವ ನೂತನ ಮಾದರಿ ಅಂಗನವಾಡಿ ಬಹುತೇಕ ಸಿದ್ಧಗೊಂಡಿದ್ದು, ಉದ್ಘಾಟನೆಗೆ ತಯಾರಾಗುತ್ತಿದೆ. ಕಟ್ಟಡದ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವೊಂದು ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಅವುಗಳು ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಮಕ್ಕಳ ಬಳಕೆಗೆ ಲಭ್ಯವಾಗಲಿದೆ.
ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳ ನಡುವೆ ಕೂರಿಸಿ ಪಾಠ ಹೇಳುವ ಸಾಂಪ್ರದಾಯಿಕ ವ್ಯವಸ್ಥೆಯಿಂದ ಹೊರಬಂದು, ಆಟ, ನಲಿವು, ಕುಣಿತ, ಬರವಣಿಗೆ ಹಾಗೂ ಪರಿಸರದೊಂದಿಗೆ ಬೆರೆಯುವ ಅವಕಾಶವನ್ನು ಕಲ್ಪಿಸುವುದು ಈ ಮಾದರಿ ಅಂಗನವಾಡಿಯ ವಿಶೇಷ ಪರಿಕಲ್ಪನೆ
ಮಗುವಿನ ಬೆಳವಣಿಗೆಯ ಆರಂಭಿಕ ವರ್ಷಗಳು ಅತ್ಯಂತ ಮಹತ್ವದ್ದಾಗಿದ್ದು, ಆ ಅವಧಿಯಲ್ಲಿ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಸಿಗಬೇಕು. ಮಕ್ಕಳು ಭಯದಿಂದಲ್ಲ, ಖುಷಿಯಿಂದ ಅಂಗನವಾಡಿಗೆ ಬರಬೇಕು. ಆಟವಾಡುತ್ತಾ ಕಲಿಯಬೇಕು, ಪ್ರಕೃತಿಯೊಂದಿಗೆ ಬೆರೆಯಬೇಕು, ತಮ್ಮದೇ ಆದ ಪುಟ್ಟ ಜಗತ್ತಿನಲ್ಲಿ ಸ್ವತಂತ್ರವಾಗಿ ಬೆಳೆಯಬೇಕು ಎಂಬ ಚಿಂತನೆಗೆ ಇಲ್ಲಿ ಆದ್ಯತೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪುಗೊಂಡಿದ್ದು, ನೂತನ ಕಟ್ಟಡದ ವಿನ್ಯಾಸವನ್ನು ಮಣೀಶ್ ಕುಮಾರ್ ಅವರ ಸ್ಟುಡಿಯೋ ತೋಫಾ ಸಂಸ್ಥೆ ಸಿದ್ಧಪಡಿಸಿದೆ.
ಹೀಗಾಗಿ ಇದು ಕೇವಲ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಕೇಂದ್ರವಾಗಿರದೆ, ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ಪ್ರಯತ್ನವಾಗಿದೆ. ಅಂಗನವಾಡಿಯ ದಿನಗಳು ಮಕ್ಕಳ ಜೀವನದಲ್ಲಿ ಸುಂದರ ನೆನಪುಗಳಾಗಿ ಉಳಿಯಬೇಕು ಎಂಬ ಆಶಯ ವಿನ್ಯಾಸದ ಹಿಂದಿದೆ.
ಬಂಟ್ವಾಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಪಕ್ಕದಲ್ಲಿಯೂ ಮತ್ತೊಂದು ಮಾದರಿ ಅಂಗನವಾಡಿ ನಿರ್ಮಾಣವಾಗುತ್ತಿದೆ. ಇದು ಕೂಡ ಇದೇ ಪರಿಕಲ್ಪನೆಯಡಿ ವಿಭಿನ್ನ ವಿನ್ಯಾಸದಲ್ಲಿ ರೂಪುಗೊಳ್ಳುತ್ತಿದ್ದು, ಪೂರ್ಣಗೊಂಡ ಬಳಿಕ ಮಕ್ಕಳಿಗೆ ಹೊಸ ರೀತಿಯ ಕಲಿಕಾ ವಾತಾವರಣ ಒದಗಿಸಲಿದೆ. ಈ ಎರಡು ಕೇಂದ್ರಗಳು ಮುಂದಿನ ದಿನಗಳಲ್ಲಿ ತಾಲೂಕಿನ ಇತರ ಅಂಗನವಾಡಿಗಳಿಗೂ ಮಾದರಿಯಾಗುವ ನಿರೀಕ್ಷೆಯಿದೆ.
ಮಕ್ಕಳ ಖುಷಿಯೇ ನಮ್ಮ ಉದ್ದೇಶ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಎಚ್.ಐ. ಮಾತನಾಡಿ, “ಮಗು ಖುಷಿಯಿಂದ, ಯಾವುದೇ ಭಯವಿಲ್ಲದೆ ಅಂಗನವಾಡಿಗೆ ಬರಬೇಕು. ಮಗುವಿನ ಜೀವಿತಾವಧಿಯಲ್ಲಿ ಅಂಗನವಾಡಿಯ ದಿನಗಳು ಸುಂದರ ನೆನಪುಗಳಾಗಿ ಉಳಿಯಬೇಕು. ತಾಲೂಕಿನ ಎಲ್ಲ ಅಂಗನವಾಡಿಗಳೂ ಇದೇ ಮಾದರಿಯಲ್ಲಿ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯ.
ಶಾಸಕರ ವಿಶೇಷ ಮುತುವರ್ಜಿ ಹಾಗೂ ಮಾರ್ಗದರ್ಶನದಂತೆ ಅವರ ಕನಸಿನ ಪರಿಕಲ್ಪನೆಗೆ ಅನುಗುಣವಾಗಿ ಈ ಅಂಗನವಾಡಿ ನಿರ್ಮಾಣಗೊಂಡಿದೆ. ಮಕ್ಕಳ ಸ್ನಾಯುಗಳು ಹಾಗೂ ದೈಹಿಕ ಸಾಮರ್ಥ್ಯ ಬೆಳೆಯುವ ಈ ಆರಂಭಿಕ ಹಂತದಲ್ಲಿ ಅವರು ಆಟವಾಡುತ್ತಾ, ಕುಣಿಯುತ್ತಾ, ಬರೆಯುತ್ತಾ ಸಂತೋಷದಿಂದ ಬೆಳೆಯುವ ವಾತಾವರಣ ಕಲ್ಪಿಸುವುದೇ ಇದರ ಮುಖ್ಯ ಉದ್ದೇಶ” ಎಂದು ತಿಳಿಸಿದರು.
| 14ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಂದ ಪ್ರಶಸ್ತಿ ಸ್ವೀಕಾರ (more…)
(more…)
(more…)