ರಾಜ್ಯ ಸರ್ಕಾರ ಹಾಲು ಹಾಗೂ ಬಸ್ ಪ್ರಯಾಣ ದರ ಏರಿಕೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆದರೆ, ಈ ಎಲ್ಲಾ ಬೆಲೆ ಏರಿಕೆಗಳಿಗೆ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳೇ ಮೂಲ ಕಾರಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ತಿರುಗೇಟು ನೀಡಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ನಡೆಸುವ ಮೊದಲು, ಬಿಜೆಪಿ ನಾಯಕರು ತಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವ ಕೆಲಸ ಮಾಡಲಿ” ಎಂದು ಆಗ್ರಹಿಸಿದರು.
ಕಳೆದ ಹನ್ನೆರಡು ವರ್ಷಗಳಿಂದ ತಪ್ಪು ಆರ್ಥಿಕ ನೀತಿಯಿಂದಾಗಿ ಜನಸಾಮಾನ್ಯರ ಬದುಕಿಗೆ ಸಮಸ್ಯೆಯಾಗಿದೆ. ಇಂದು ಅನಿವಾರ್ಯವಾಗಿ ರಾಜ್ಯ ಸರಕಾರ ಬಸ್ ಪ್ರಯಾಣದರ ಏರಿಸಿದೆ. ರೈತರಿಗೆ ಅನುಕೂಲಕ್ಕಾಗಿ ಹಾಲಿನ ದರ ಏರಿಸಿದೆ.ಅಷ್ಟಕ್ಕೆ ಅರಾಜಕತೆ ಎನ್ನುವ ಬಿಜೆಪಿಯವರು ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ದರ ಏರಿಸುವಾಗ, ಜಿ.ಎಸ್.ಟಿ. ನೆಪದಲ್ಲಿ ತೆರಿಗೆ ವಸೂಲಾತಿ ಮಾಡುವ ವೇಳೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ತೈಲ ಕಂಪೆನಿಗಳಿಗೆ ಲಾಭ ಆಗುವ ಕೆಲಸವನ್ನು ಕೇಂದ್ರದ ಬಿಜೆಪಿ ಮಾಡಿದೆ. ಈಗ ಎಥೆನಾಲ್ ಪ್ರಮಾಣವನ್ನು ಜಾಸ್ತಿ ಮಾಡಿ ಆ ಕಂಪೆನಿಗೆ ಲಾಭ ಆಗಿದೆಯೇ ಹೊರತು, ಜನರಿಗೆ ಸಮಸ್ಯೆ ಆಗುತ್ತಿದೆ ಎಂದರು. ಸಿದ್ದರಾಮಯ್ಯ ಸರಕಾರ ಇದ್ದಾಗ ಹಲವು ನಿಗಮದ ಸಾಲ ಮನ್ನಾ ಮಾಡಲಾಗಿದೆ. ಬಡವರ ಪರವಾಗಿ ಅನ್ನಭಾಗ್ಯ ಪ್ರಥಮವಾಗಿ ನೀಡಿದ್ದು, ಬಿಪಿಎಲ್ ಆರಂಭಿಸಿದ್ದು ಕಾಂಗ್ರೆಸ್ ನ ಸಾಧನೆ, ಖಾಸಗಿಯವರಿಗೆ ಸರಕಾರಿ ಸ್ವಾಮ್ಯದ ಸೊತ್ತುಗಳನ್ನು ಕೊಟ್ಟದ್ದು ಕೇಂದ್ರದ ಸಾಧನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಎಂ.ಅಬ್ಬಾಸ್ ಆಲಿ, ಸುದೀಪ್ ಶೆಟ್ಟಿ ಮಾಣಿ, ಇಬ್ರಾಹಿಂ ನವಾಝ್ ಬಡಕಬೈಲ್, ಲವೀನಾ ವಿಲ್ಮಾ ಮೋರಾಸ್, ಐಡಾ ಸುರೇಶ್, ಸಿದ್ದಿಕ್ ಗುಡ್ಡೆಯಂಗಡಿ, ಸಂಪತ್ ಕುಮಾರ್ ಶೆಟ್ಟಿ, ಕುಶಲ ಶೆಟ್ಟಿ, ನಿರಂಜನ್ ರೈ, ನೌಫಾಲ್ ಕನ್ಯಾನ ಉಪಸ್ಥಿತರಿದ್ದರು