ಇಲ್ಲಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಸರ್ವಿಸ್ ರಸ್ತೆಯಿಂದ ನರಿಕೊಂಬು -ಶಂಭೂರು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅವ್ಯವಸ್ಥೆಯಿಂದ ಕೂಡಿದೆ ಎಂದು ಸ್ಥಳೀಯರು ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ದೂರು ನೀಡಿದ್ದಾರೆ.
ಪಾಣೆಮಂಗಳೂರು ಸರ್ವಿಸ್ ರಸ್ತೆ ಬಳಿ ನಡೆಯುತ್ತಿರುವ ನರಿಕೊಂಬು-ಶಂಭೂರು ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಭೇಟಿ ನೀಡಿ ಅವರು ವೀಕ್ಷಿಸಿದರು.
ಪಾಣೆಮಂಗಳೂರಿನಿಂದ ನರಿಕೊಂಬು-ಶಂಭೂರು ಗ್ರಾಮ ಸಂಪರ್ಕಿಸುವ ರಸ್ತೆಯನ್ನು ಮುಚ್ಚಿ ಜೆಸಿಬಿ ಮೂಲಕ ರಸ್ತೆ ಅಗೆದು ಹಾಕಿದ್ದಾರೆ. ಈ ಇಳಿಜಾರು ರಸ್ತೆ ತೀರಾ ಕಿರಿದಾಗಿದ್ದು, ಇದನ್ನು ಎತ್ತರ ಕಡಿಮೆಗೊಳಿಸಿ ವಿಸ್ತರಣೆಗೊಳಿಸಬೇಕು. ಪ್ರತಿದಿನ ನೂರಾರು ವಾಹನ ಓಡಾಡುತ್ತಿದ್ದು, ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೆಡಿಪಿ ಮಾಜಿ ಸದಸ್ಯ ಉಮೇಶ ಬೋಳಂತೂರು ಆಗ್ರಹಿಸಿದರು. ಈಗಾಗಲೇ ವಾಹನ ಸವಾರರು ಉಪಯೋಗಿಸುತ್ತಿರುವ ಪರ್ಯಾಯ ರಸ್ತೆ ಜೈನ ಬಸದಿಯಿಂದ ಅಂಡರ್ ಪಾಸ್ ಮೂಲಕ ನರಿಕೊಂಬು ಸರ್ಕಾರಿ ಪ್ರಾಥಮಿಕ ಶಾಲೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ವಾಹನಗಳಿಗೆ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರು. ತಹಸೀಲ್ದಾರ್ ಜಿ.ಮಂಜುನಾಥ್ ಮತ್ತು ತಾಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಅವರಿಗೆ ಈ ಕಾಮಗಾರಿ ಬಗ್ಗೆ ನಿಗಾ ವಹಿಸಲು ತಿಳಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಆಲ್ಬಟ್ ಮಿನೇಜಸ್, ಕೃಷ್ಣಪ್ಪ ಪೂಜಾರಿ, ರವೀಂದ್ರ ಸಪಲ್ಯ, ಪ್ರಸಾದ್ ಗಾಣಿಗ, ನಿತ್ಯಾನಂದ ಕುರ್ಚಿಪಲ್ಲ, ಉಮೇಶ್ ನೆಲ್ಲಿಗುಡ್ಡೆ, ನರ್ಸಪ್ಪ ಅಮೀನ್, ಶೈಲೇಶ್ ಪೂಜಾರಿ, ಲೋಕೇಶ್, ಮೋನಪ್ಪ ನಿನ್ನಿಪಡ್ಪು, ಸತೀಶ್ ಶೇಡಿಗುರಿ ಮತ್ತಿತರರು ಉಪಸ್ಥಿತದ್ದರು.