‘ಅಭಿರುಚಿ ಜೋಡುಮಾರ್ಗ’ ಪ್ರಸ್ತುತಪಡಿಸಿದ ಹಾಗೂ ಅಯನ ಮೂಡುಬಿದಿರೆ ಅಭಿನಯದ ಊರ್ಮಿಳಾ’ ಏಕವ್ಯಕ್ತಿ ರಂಗಪ್ರಯೋಗ ಶುಕ್ರವಾರ ಸಂಜೆ ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಅಯನ ಮೂಡುಬಿದಿರೆ ಪ್ರಸ್ತುತಿಯ ಏಕವ್ಯಕ್ತಿ ರಂಗಪ್ರಯೋಗ ಊರ್ಮಿಳಾ ಕಥೆಯನ್ನು ಡಾ. ಎಚ್.ಎಸ್.ವೆಂಕಟೇಶಮೂರ್ತಿ ರಚಿಸಿದ್ದಾರೆ.
ಡಾ.ಶ್ರೀಪಾದ ಭಟ್ ಅವರ ವಿನ್ಯಾಸ, ನಿರ್ದೇಶನ, ಡಾ. ಮೂಕಾಂಬಿಕಾ ಜಿ.ಎಸ್. ಅವರ ಸಂಗೀತ ನಿರ್ವಹಣೆ ಹಾಗೂ ಮಂಗಳೂರಿನ ಕೆ.ವಿ.ರಮಣ್ ನಿರ್ವಹಣೆಯಲ್ಲಿ ರಂಗಪ್ರಯೋಗ ಮೂಡಿಬಂತು.
ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ, ದ.ಕ. ಜಿಲ್ಲಾ ಸಂಸ್ಕಾರ ಭಾರತಿ ಅಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ, ಡಾ. ಆಶಾಲತಾ ಸುವರ್ಣ, ಪಾಣೆಮಂಗಳೂರು ಶ್ರೀ ವೀರವಿಠಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಪ್ರಮೋದ್ ಭಟ್ ಮತ್ತು ಲಕ್ಷ್ಮೀ ದಂಪತಿ, ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮ ಭಟ್ ಮತ್ತು ಸಾವಿತ್ರಿ ದಂಪತಿ, ಉದ್ಯಮಿ ಎಂ.ಎನ್. ಕುಮಾರ್ ಮತ್ತು ಪುಷ್ಪಲತಾ ದಂಪತಿ, ಹಾಗೂ ಮೋಹನ ಪೈ ಮಾಣಿ ಮತ್ತು ಮೈತ್ರಿ ದಂಪತಿ, ಶಿಕ್ಷಣ ಸೌರಭ ಪ್ರಶಸ್ತಿ ಪುರಸ್ಕೃತ ಜಯಾನಂದ ಪೆರಾಜೆ ಸಹಿತ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಭಿರುಚಿ ಜೋಡುಮಾರ್ಗ ಅಧ್ಯಕ್ಷ ದಾಮೋದರ ರಾಮಕುಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಕರ್ಮಿ, ಅಭಿರುಚಿಯ ಪ್ರಮುಖರಾದ ಮಹಾಬಲೇಶ್ವರ ಹೆಬ್ಬಾರ ಮಾತನಾಡಿದರು.
‘ಊರ್ಮಿಳಾ’ ಎಂಬುದು ರಾಮಾಯಣದ ಪ್ರಮುಖ ಹಾಗೂ ತ್ಯಾಗಮಯಿ ಪಾತ್ರವಾದ ಊರ್ಮಿಳೆಯ ಕಥೆಯನ್ನು ಪ್ರಧಾನವಾಗಿರಿಸಿಕೊಂಡು ಮೂಡಿಬಂದ ಅಪರೂಪದ ಏಕವ್ಯಕ್ತಿ ರಂಗಪ್ರಯೋಗವಾಗಿದೆ. ಕಲಾವಿದೆ ವಿದುಷಿ ಅಯನಾ ವಿ. ರಮಣ್ ಅವರು ಊರ್ಮಿಳೆಯ ವಿವಿಧ ಭಾವನೆಗಳು, ನೋವು, ನಿರೀಕ್ಷೆ ಹಾಗೂ ತ್ಯಾಗವನ್ನು ತಮ್ಮ ತಲ್ಲೀನತೆಯ ಅಭಿನಯದ ಮೂಲಕ ರಂಗದ ಮೇಲೆ ಜೀವಂತಗೊಳಿಸಿದರು.