ಬಂಟ್ವಾಳದ ಫರ್ಲಾದಲ್ಲಿರುವ ಸೈಂಟ್ ಜೇಕಬ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮ ನವೆಂಬರ್ 4ರಂದು ಬುಧವಾರ ನಡೆಯಲಿದೆ.
ಶಾಲಾ ಸಂಚಾಲಕರಾದ ವಂ.ಫಾ.ಮಾರ್ಕ್ ಅರುಣ್ ಡಿಸೋಜ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ದಾನಿಗಳ ಹಾಗೂ ಊರವರ ಪ್ರೋತ್ಸಾಹದಿಂದ ಶಾಲೆ ಮುನ್ನಡೆಯುತ್ತಿದೆ. ಶರಮಾನೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಶಾಲೆಗೆ ಕೊಡುಗೆ ನೀಡಿದ ಮಹಾದಾನಿಗಳನ್ನು ಗುರುತಿಸಲಾಗುವುದು. 4ರಂದು ಬೆಳಗ್ಗೆ ಬಂಟ್ವಾಳ ವಲಯ ಪ್ರಧಾನ ಗುರುಗಳಾದ ವಂ.ಫಾ.ವಿಕ್ಟರ್ ಡಿಸೋಜ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಈ ವೇಳೆ ಗೋಪಾಲಕೃಷ್ಣ ದೇವಸ್ಥಾನ ಅರ್ಚಕ ಸುದರ್ಶನ ಬಲ್ಲಾಳ್ ಮತ್ತು ನಾವೂರು ಅಗ್ರಹಾರ ಆಲ್ ಅಮೀನ್ ಅಜು ಅಕಾಡೆಮಿಯ ಉಸ್ತಾದ್ ಎಂ.ಎ.ಸಖಾಫಿ ಅಬ್ದುಲ್ ಖಾದರ್ ಮತ್ತಿತರರು ಪಾಲ್ಗೊಳ್ಳುವರು.
ಅಪರಾಹ್ನ 2.15ಕ್ಕೆ ಶಾಲಾ ಶತಮಾನೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಪೀಟರ್ ಪಾವ್ಲ್ ಡಿಸೋಜ ಉದ್ಘಾಟಿಸಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಧರ್ಮಪ್ರಾಂತ್ಯದ ಶ್ರೇಷ್ಠಗುರುಗಳಾದ ವಂ.ಫಾ.ಮ್ಯಾಕ್ಸಿಂ ನೊರೊನ್ಹ, ಸಿಬಿಇ ಕಾರ್ಯದರ್ಶಿಗಳಾದ ವಂ.ಫಾ.ಪ್ರವೀಣ್ ಲಿಯೋ ಲಸ್ರಾದೊ, ಪ್ರಾಂತ್ಯಾಧಿಕಾರಿ ವಂ.ಫಾ.ಮೈಕಲ್ ಆಲ್ಮೇಡ, ಕರ್ನಾಟಕ ರೀಜನಲ್ ಕಮಿಷನ್ ಫಾರ್ ಎಜುಕೇಶನ್ ಆಡಳಿತ ಮಂಡಳಿ ಸದಸ್ಯ ವಂ.ಫಾ.ಗಿಲ್ಬರ್ಟ್ ಮಸ್ಕರೇನಸ್, ಶಾಲಾ ಸಂಚಾಲಕ ವಂ.ಫಾ.ಮಾರ್ಕ್ ಅರುಣ್ ಡಿಸೋಜ ದಿವ್ಯ ಸಾನಿಧ್ಯ ವಹಿಸುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ,ಮಾಜಿ ಸಚಿವ ಬಿ.ರಮಾನಾಥ ರೈ, ಬಿಇಒ ಮಾಲತಿ ಕೆ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಕ್ಯಾಸ್ಟಲಿನೊ, ಕಾರ್ಯದರ್ಶಿ ಸುನಿತಾ ಬ್ಯಾಪ್ಟಿಸ್ಟ್, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಕೇಶವ, ಮುಖ್ಯ ಶಿಕ್ಷಕ ವೈ.ಎಫ್. ಕಾಲವಾಡ ಅತಿಥಿಗಳಾಗಿರುವರು. ಮಹಾದಾನಿಗಳಾದ ಪ್ರಭಾಕರ ದಂಪತಿ, ಬರ್ನಾರ್ಡ್ ಸಲ್ದಾನ ಮತ್ತು ಜಸಿಂತ ಟಿ.ಡಿಸೋಜ ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಕ್ಯಾಸ್ಟಲಿನೊ, ನಿವೃತ್ತ ಮುಖ್ಯ ಶಿಕ್ಷಕಿ ಜಸಿಂತ ಟಿ. ಡಿಸೋಜ, ಮುಖ್ಯೋಪಾಧ್ಯಾಯ ವೈ.ಎಫ್.ಕಾಲವಾಡ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.