ಬಂಟ್ವಾಳ: ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ಸಮಿತಿ, ಬಂಟ್ವಾಳ ಇದರ ವತಿಯಿಂದ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ವಠಾರದಲ್ಲಿ 59ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಶುಕ್ರವಾರದಿಂದ ಆರಂಭಗೊಂಡಿದ್ದು, ಅಕ್ಟೋಬರ್ 22ವರೆಗೆ ನಡೆಯಲಿದೆ.
ಅಕ್ಟೋಬರ್ 17ರಂದು ಸಂಜೆ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8:15ರಿಂದ ವಟಪುರ ರಂಗ ಕಲಾವಿದರು, ಬಂಟ್ವಾಳ ಇವರಿಂದ ಕೊಂಕಣಿ ಸಾಮಾಜಿಕ ಹಾಸ್ಯಮಯ ನಾಟಕ ‘ದೇವೂ ಗತಿ’ ಪ್ರದರ್ಶನಗೊಳ್ಳಲಿದೆ.
ಅಕ್ಟೋಬರ್ 18ರಂದು ಮಧ್ಯಾಹ್ನ ಮಹಾಪೂಜೆ ಹಾಗೂ ರಾತ್ರಿ 8:15ರಿಂದ ವಿಶೇಷ ‘ದಂಡಿಯಾ ನೈಟ್’ ಕಾರ್ಯಕ್ರಮವಿದ್ದು, ಲಕ್ಕಿ ಡ್ರಾ ಮೂಲಕ ವಿಜೇತರಿಗೆ ರೂ. 18,999 ಮೌಲ್ಯದ ರೆಫ್ರಿಜರೇಟರ್ ಗೆಲ್ಲುವ ಅವಕಾಶವಿರುತ್ತದೆ. ಅಕ್ಟೋಬರ್ 19ರಂದು ಸಂಜೆ ದುರ್ಗಾನಮಸ್ಕಾರ ಪೂಜೆ ಹಾಗೂ ರಾತ್ರಿ 9:00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಇದರೊಂದಿಗೆ ವಟಪುರ ರಂಗ ಕಲಾವಿದೆಯರಿಂದ ಕೊಂಕಣಿ ಸಾಮಾಜಿಕ ಹಾಸ್ಯಮಯ ನಾಟಕ ‘ಡೈಟ್’ ಪ್ರಸ್ತುತಿಗೊಳ್ಳಲಿದೆ. ಅಕ್ಟೋಬರ್ 20ರಂದು ಮಧ್ಯಾಹ್ನ ಮಹಾಪೂಜೆ ಹಾಗೂ ವಿಸರ್ಜನಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಲಕುಮಿ ತಂಡದ ಕುಸಾಲ ಕಲಾವಿದರಿಂದ ‘ಎಂಚ ನಾದರ್… ಚಂದಾವತಿ’ ನಾಟಕ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 21ರಂದು ರಾತ್ರಿ 8:15ರಿಂದ ಪ್ರಕಾಶ್ ಮಹದೇವನ್ ಮತ್ತು ಬಳಗದಿಂದ (ಕೆ.ಜಿ.ಎಫ್ ಹಿನ್ನೆಲೆ ಗಾಯಕರು) ಬಹುಭಾಷಾ ಗೀತಗಾಯನ ಕಾರ್ಯಕ್ರಮವಿರುತ್ತದೆ. ಅಕ್ಟೋಬರ್ 22ರಂದು ರಾತ್ರಿ 10 ಗಂಟೆಯ ನಂತರ ವೈಭವದ ಶ್ರೀ ದೇವಿಯ ಶೋಭಾಯಾತ್ರೆ ಹಾಗೂ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.