| ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಮಾಹಿತಿ ಕಾರ್ಯಕ್ರಮ
ಕೇಂದ್ರ ಸರಕಾರದ ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ ಅಡಿಯಲ್ಲಿ ಸೇವಾ ಸೇತು ಅಭಿಯಾನ ವನ್ನು ಮೆಸ್ಕಾಂ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ವಿಶೇಷ ಜಾಗೃತಿ ಹಾಗೂ ನೆರವು ಶಿಬಿರ ಬುಧವಾರ ಆರಂಭಗೊಂಡಿದ್ದು, ಅಕ್ಟೋಬರ್ 16ರವರೆಗೆ ಬಿ.ಸಿ.ರೋಡಿನ ಮೆಸ್ಕಾಂ ಕಚೇರಿ ಆವರಣದಲ್ಲಿ ನಡೆಯಲಿದೆ.
ಸಾರ್ವಜನಿಕರಿಗೆ ಒಂದೇ ಸೂರಿನಡಿ ಸೋಲಾರ್ ವಿದ್ಯುತ್ ಅಳವಡಿಕೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ನೀಡುವ ಕಾರ್ಯವನ್ನು ಸೋಲಾರ್ ವಿದ್ಯುತ್ ಕಂಪನಿಗಳು ನೀಡಿದವು. ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಕುರಿತು ವಿವರ ನೀಡಲಾಯಿತು. ಇದಕ್ಕೆ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವು ಮತ್ತು ರಿಯಾಯಿತಿಗಳ ಬಗ್ಗೆ ಮಾರ್ಗದರ್ಶನ ಒದಗಿಸಲಾಯಿತು.
ಸ್ಥಳದಲ್ಲೇ ಆನ್ಲೈನ್ ಮೂಲಕ ಯೋಜನೆಗೆ ನೋಂದಾಯಿಸಿಕೊಳ್ಳಲು ನೆರವು, ಸಾಲ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಲಾಯಿತು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹಾಗೂ ಆರ್ಇಸಿ ಸಂಸ್ಥೆಯ ಸಹಯೋಗದೊಂದಿಗೆ ಮೆಸ್ಕಾಂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಎಕ್ಸಿಕ್ಯುಟಿವ್ ಇಂಜಿನಿಯರ್ ಸಂತೋಷ್ ನಾಯಕ್ ತಿಳಿಸಿದ್ದಾರೆ. ಎಇಇಗಳಾದ ನಾರಾಯಣ ಭಟ್ ಮತ್ತು ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು. ಸೆಲ್ಕೊ ಸೋಲಾರ್ , ಟಾಟಾ ಸೋಲಾರ್ ಮತ್ತು ಗ್ರೀನ್ ಎನರ್ಜಿಯವರು ಮಳಿಗೆಗಳನ್ನು ಅಳವಡಿಸಿದ್ದರು.