ಬಂಟ್ವಾಳ

ಸಜೀಪ ದಸರಾಕ್ಕೆ ಶತಸಂಭ್ರಮ – 100ನೇ ವರ್ಷಾಚರಣೆ — Details

ಬಂಟ್ವಾಳ: ಸಜೀಪಮೂಡದ ಸುಭಾಷ್ ನಗರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸುಭಾಷ್ ಯುವಕ ಮಂಡಲ (ರಿ), ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ವತಿಯಿಂದ ಆಚರಿಸಲ್ಪಡುವ ಶ್ರೀ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮ ಅಕ್ಟೋಬರ್ 17ರಿಂದ 22ರವರೆಗೆ ನಡೆಯಲಿದೆ.

ಶತಮಾನೋತ್ಸವ ಶಾರದಾ ಪೂಜಾ ಸಮಿತಿ ಅಧ್ಯಕ್ಷ  ಎನ್. ವಿವೇಕ್ ಶೆಟ್ಟಿ ನಗ್ರಿ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 100ನೇ ವರ್ಷಾಚರಣೆ ಹಿನ್ನೆಲೆ ಆರು ದಿನಗಳ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು, ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ಬಡವರಿಗೆ ಮನೆ ಹಾಗೂ ವೈದ್ಯಕೀಯ ನೆರವು ನೀಡುವ ಕಾರ್ಯ ಮಾಡಲಾಗಿದೆ. ಸುಭಾಷ್ ನಗರ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸಲಾಗಿದೆ ಎಂದರು.

17ರಂದು ಬೆಳಗ್ಗೆ ಶ್ರೀ ಶಾರದಾ ದೇವಿ ಪ್ರತಿಷ್ಠೆ , ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಶಾಲೆಗೆ ದಾನಿಗಳ ನೆರವಿನಿಂದ ನಿರ್ಮಿಸಲಾದ ಸುಸಜ್ಜಿತ ಕೊಠಡಿಯ ಉದ್ಘಾಟನೆ ನೆರವೇರಿಸಲಾಗುವುದು. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಗಣ್ಯರು ಆಗಮಿಸುವರು. 18ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಭಾಗವಹಿಸುವರು. 21ರಂದು ಸಂಜೆ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. 17ರಂದು ಸಂಜೆ ಸ್ಥಳೀಯ ತಂಡಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, 18ರಂದು ಚಲನಚಿತ್ರ ಹಿನ್ನೆಲೆ ಗಾಯಕರ ಸಂಗೀತ ವೈಭವ, 19ರಂದು ಚಾಪರ್ಕ ಕಲಾವಿದರಿಂದ ಯಾನೊರಿ ಬರೊಲಿಯಾ ನಾಟಕ, 20ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ, 21ರಂದು ಶನಿ ಮಹಾತ್ಮೆ ಪೌರಾಣಿಕ ನಾಟಕ ನಡೆಯಲಿದೆ ಎಂದವರು ಮಾಹಿತಿ ನೀಡಿದರು.

ಜಾಹೀರಾತು

ಕಾರ್ಯಕ್ರಮ ನಿಮಿತ್ತ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರಡಲಿದೆ. 22ರಂದು ಗುರುವಾರ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ನಾಸಿಕ್ ಬ್ಯಾಂಡ್, ತಂಬೋಲಂ, ಸ್ತಬ್ದ ಚಿತ್ರಗಳು, ಚೆಂಡೆ, ವಯೋಲಿನ್, ಕುಣಿತ ಭಜನೆ, ಗೊಂಬೆ ಕುಣಿತ ಮತ್ತು ಹಲವು ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ಉತ್ಸವ ವೇದಿಕೆಯಿಂದ ಹೊರಟು ಮಾರ್ನಬೈಲಿನಲ್ಲಿ ಪೂಜೆ ಸ್ವೀಕರಿಸಿ ಹಿಂದಿರುಗಿ ಸುಭಾಷ್ ನಗರವಾಗಿ ವಿದ್ಯಾನಗರದಲ್ಲಿ ಪೂಜೆ ಸ್ವೀಕರಿಸಿ, ಅಲ್ಲಿಂದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪೂಜೆ ಸ್ವೀಕರಿಸಿ, ನಂತರ ಆಲಾಡಿ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ಪ್ರತಿಷ್ಠಾ ವಿಸರ್ಜನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಬಿ.ಶೋಭಿತ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್. ಶ್ರೀಕಾಂತ ಶೆಟ್ಟಿ, ಕೋಶಾಧಿಕಾರಿ ಕೀರ್ತನ್ ಆಳ್ವ ಕಾಂತಾಡಿಗುತ್ತು, ಜೊತೆ ಕಾರ್ಯದರ್ಶಿ ಸುಜೀತ್ ಕುಮಾರ್ ಬೆಂಕ್ಯ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.