ಬಂಟ್ವಾಳ: ಬಿ.ಸಿ.ರೋಡಿನ ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಕಾಕುಂಜೆ ಸಾಫ್ಟ್ವೇರ್ ಕಂಪೆನಿ ಪ್ರೈವೇಟ್ ಲಿಮಿಟೆಡ್ ಸ್ಥಾಪಕರು ಹಾಗೂ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಕಾಕುಂಜೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಆಟಿಸಂ ನಂತಹ ಸಂಕೀರ್ಣವಾದ ದಿವ್ಯಾಂಗತೆಯುಳ್ಳ ವ್ಯಕ್ತಿಗಳಿಗೆ ಏಐಯನ್ನು ಬಳಸಿ ರೋಬೋಟ್ ಗಳ ಮೂಲಕ ಥೆರಪಿಗಳನ್ನು ಕೊಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿಕಾಸಂ ಸೇವಾ ಫೌಂಡೇಶನ್ ಜೊತೆಗೆ ಸಹಭಾಗಿತ್ವದಲ್ಲಿ ಈ ಸಂಶೋಧನೆಗಳನ್ನು ಮುಂದುವರಿಸುವ ಆಸಕ್ತಿಯನ್ನು ಹೊಂದಿದೆ ಎಂದರು.
ಇನ್ನೋರ್ವ ಅತಿಥಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಮಾಜಿ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಮಾತನಾಡಿ ವಿಕಾಸಂ ಸಂಸ್ಥೆಯ ಶಿಕ್ಷಕರು ದಿವ್ಯಾಂಗರಿಗೆ ಸಲ್ಲಿಸುತ್ತಿದ್ದ ಸೇವೆಯನ್ನು ಶ್ಲಾಘಿಸಿದರು.
ಶಿಕ್ಷಣ ಇಲಾಖೆಯ ಬಿ ಆರ್ ಟಿ ಸುರೇಖಾ ಯಳವರ ಮಾತನಾಡಿ, ಮೊಬೈಲ್ ಯುಗದಲ್ಲಿ ದಿವ್ಯಾಂಗರು ಮಾತ್ರವಲ್ಲದೆ ಸಾಮಾನ್ಯ ಮಕ್ಕಳ ವರ್ತನೆಯನ್ನು ತಿದ್ದಲು ಆಕ್ಯುಪೇಶನ್ ಥೆರಪಿಯ ಅವಶ್ಯಕತೆ ಇದೆ ಎಂದರು.
ಪತ್ರಕರ್ತ ಹರೀಶ್ ಮಾಂಬಾಡಿ ಮಾತನಾಡಿ, ದಿವ್ಯಾಂಗ ಮಕ್ಕಳು ವಿಶೇಷ ಶಿಕ್ಷಕರ ಜೊತೆಗೆ ಆಪ್ತ ಭಾವವನ್ನು ಹೊಂದಿರುತ್ತಾರೆ. ಇಂತಹ ಆಪ್ತ ಭಾವವನ್ನು ಮೂಡಿಸುವ, ಉಳಿಸಿಕೊಳ್ಳುವ ವಿಶೇಷ ಶಿಕ್ಷಕರ ಕೆಲಸ ಅತ್ಯಂತ ಪವಿತ್ರವಾದದ್ದು ಎಂದರು. ಕೆನರಾ ಸ್ಕೂಲ್ ಬುಕ್ಸ್ ಮಾಲೀಕ ಅನೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಿಕಾಸಂ ಸೇವಾ ಫೌಂಡೇಶನ್ ಸಹ ಸಂಸ್ಥಾಪಕರಾದ ಗೋಪಾಲ್ ಗೋವಿಂತೋಟ ವಹಿಸಿದ್ದರು.
ಈ ಸಂದರ್ಭ ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಶಿಕ್ಷಕಿ ರೇಣುಕಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಇತರ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು.
ವಿಕಾಸಂ ಸೇವಾ ಫೌಂಡೇಶನ್ ನ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಸ್ವಾಗತಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಸ್ಥೆಯ ಹಿರಿಯ ವಾಕ್ ಶ್ರವಣ ತಜ್ಞರಾದ ಶೀಲಾ ತಿಲಕ್ ಹೆತ್ತವರಿಗಾಗಿ ದಿವ್ಯಾಂಗ ಮಕ್ಕಳಲ್ಲಿ ಸಂವಹನಾ ಕೌಶಲ್ಯವನ್ನು ಸುಧಾರಿಸುವ ತಂತ್ರಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿದರು ಎಂಎಸ್ ಡಬ್ಲ್ಯು ವಿದ್ಯಾರ್ಥಿ ಮೊಹಮ್ಮದ್ ಅಲಿ ವಂದಿಸಿದರು. ಇನ್ನೋರ್ವ ಎಂಎಸ್ ಡಬ್ಲ್ಯು ವಿದ್ಯಾರ್ಥಿ ವಿತೇಶ್ ಕಾರ್ಯಕ್ರಮ ನಿರೂಪಿಸಿದರು.
| ಸೆ.14ರಿಂದ 18ರವರೆಗೆ 23ನೇ ವರ್ಷದ ಅದ್ದೂರಿ ಕಾರ್ಯಕ್ರಮಗಳು (more…)