‘’ಹರಿ ಓಂ..ಆಗಚ್ಛತು..ಉಪವಿಶತು’’
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪ್ರಸ್ತುತ ಸಂಚಾಲಕರಾಗಿರುವ ಮೊದಲು ಅಧ್ಯಾಪಕ, ಮುಖ್ಯಶಿಕ್ಷಕರಾಗಿ ಕೆಲಸ ಮಾಡಿದ್ದ ವಸಂತ ಮಾಧವ ಅವರ ಮನೆಗೆ ಯಾರಾದರೂ ತೆರಳಿದರೆ, ಬನ್ನಿ, ಕುಳಿತುಕೊಳ್ಳಿ ಎಂದು ಹೇಳುವುದು ಹೀಗೆ.
ಕಳೆದ ಮೂವತ್ತೇಳು ವರ್ಷಗಳಿಂದ ಈ ಮನೆಯಲ್ಲಿ ಸಂಸ್ಕೃತ ಭಾಷೆಯಲ್ಲೇ ವ್ಯವಹಾರ. ಮಕ್ಕಳು, ದೊಡ್ಡವರ ಸಹಿತ ಎಲ್ಲರೂ ಸಹಜವಾಗಿಯೇ ಸಂಸ್ಕೃತದಲ್ಲಿ ಮಾತನಾಡುತ್ತಾರೆ.
ಜನಮಾನಸದಲ್ಲಿ ಕೇವಲ ಮಂತ್ರೋಚ್ಛಾರಕ್ಕಷ್ಟೇ ಸಂಸ್ಕೃತ ಸೀಮಿತ ಎಂಬ ಕಲ್ಪನೆಗೆ ವ್ಯತಿರಿಕ್ತವಾಗಿ ನಿತ್ಯಜೀವನದಲ್ಲೂ ಭಾಷಾಬಳಕೆ ಸಾಧ್ಯ ಎಂಬುದನ್ನು ಅವರು ನಿರೂಪಿಸಿದ್ದಾರೆ.
ಪ್ತಸ್ತುತ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಮೂರ್ಲಾರು ದ್ವಾರಕಾನಗರದಲ್ಲಿ ವಾಸವಾಗಿರುವ ಈ ಕುಟುಂಬ ಸಂಸ್ಕೃತಗೃಹವಾಗಲು ಕಾರಣ ವಸಂತ ಮಾಧವ ಅವರ ಪತ್ನಿ ಸಾವಿತ್ರಿ.
ಮನೆಯೊಡತಿ ಮೂಡಿಸಿದ ಜಾಗೃತಿ:
ಈ ಕುರಿತು ಮಾತನಾಡಿದ ವಸಂತ ಮಾಧವ ತನಗಿದ್ದ ಸಂಸ್ಕೃತದ ಒಲವು ಹಾಗೂ ಪತ್ನಿಯಾಗಿ ಬಂದ ಸಾವಿತ್ರಿ ಅವರು ಮೂಡಿಸಿದ ಭಾಷಾ ಜಾಗೃತಿ ದಿನಬಳಕೆಯ ಭಾಷೆಯಾಗಿ ಸಂಸ್ಕೃತದಲ್ಲಿ ಮಾತನಾಡಲು ಸಾಧ್ಯ ಎಂಬುದನ್ನು ನಿರೂಪಿಸಿದೆ ಎಂದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಾವಿತ್ರಿ 1984ರಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸೇವಾವ್ರತೆಯಾಗಿ ಸಂಸ್ಕೃತ ಭಾರತಿ ಕಾರ್ಯಕರ್ತೆಯಾಗಿದ್ದರು. ಸಂಸ್ಕೃತ ಸಂಭಾಷಣಾ ಶಿಬಿರ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಅವರು 1989ರಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಮುಖ್ಯೋಪಾಧ್ಯಾಯರೂ, ಗಣಿತ, ವಿಜ್ಞಾನ ಶಿಕ್ಷಕರಾಗಿದ್ದ ವಸಂತ ಮಾಧವ ಅವರನ್ನು ವಿವಾಹವಾದರು. ಈ ವೇಳೆ ವಧುವನ್ನು ಮಾತಾಡಿಸಲು ಮಾಸ್ಟ್ರು ಹೋದಾಗ, ನಮ್ಮ ಮನೆ ಸಂಸ್ಕೃತಗೃಹವಾಗಬೇಕು, ಮನೆಯಲ್ಲಿ ಎಲ್ಲರೂ ಸಂಸ್ಕೃತದಲ್ಲೇ ಮಾತಾಡ್ಬೇಕು’’ ಎಂಬ ಮನವಿ ಮಾಡಿದ್ದರು. ಅದಾದ ನಂತರ ಇಂದಿನವರೆಗೂ ಈ ಮನೆಯ ಮಾತೃಭಾಷೆಯೇ ಸಂಸ್ಕೃತ.
ವ್ಯಾವಹಾರಿಕ ಭಾಷೆಯಾಗಿ ಸಂಸ್ಕೃತ
ವಿವಾಹವಾಗಿ ಬಂದ ಮೇಲೆ ಕಲ್ಲಡ್ಕದಲ್ಲಿ ಸಂಸ್ಕೃತ ಪರಿಸರ ನಿರ್ಮಿಸಲು ಹಿರಿಯರಾದ ಕಲ್ಲಡ್ಕದ ಡಾ. ಪ್ರಭಾಕರ ಭಟ್ ದಂಪತಿ ಪ್ರೋತ್ಸಾಹ ನೀಡಿದರು. ಮಗ, ಮಗಳು ಹಾಗೂ ಈಗ ಮೊಮ್ಮಕ್ಕಳಿಗೂ ಚಿಕ್ಕಂದಿನಿಂದಲೇ ನಿತ್ಯ ಸಂಭಾಷಣೆಯ ಮೂಲಕವೇ ಸಂಸ್ಕೃತ ಕಲಿಸಿದ್ದೇವೆ. ಸೊಸೆ ಕೂಡ ನಿತ್ಯದ ವಾಕ್ಯಗಳನ್ನು ಸಂಸ್ಕೃತದಲ್ಲೇ ಮಾತನಾಡುತ್ತಾಳೆ ಎನ್ನುತ್ತಾರೆ ಸಾವಿತ್ರಿ. ಈ ದಂಪತಿಯ ಪುತ್ರ ಶಿವಕುಮಾರ್, ಪುತ್ರಿ ಚೈತ್ರಾ, ಇವರ ಮಕ್ಕಳು ಸಂಸ್ಕೃತವನ್ನು ದಿನಬಳಕೆಯ ಭಾಷೆಯಾಗಿ ಮಾಡಿಕೊಂಡಿದ್ದು, ವಸಂತ ಮಾಧವ, ಸಾವಿತ್ರಿ ದಂಪತಿಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.