ವಕೀಲರು ಹಾಗೂ ನ್ಯಾಯಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಸುಲಭವಾಗಿ ಪಡೆಯುವ ಉದ್ದೇಶದಿಂದ ಬಂಟ್ವಾಳ ವಕೀಲರ ಸಂಘದ ಕಚೇರಿಯಲ್ಲಿ ಅಂಚೆ ಇಲಾಖೆಯ ‘ಸ್ವಯಂ ಬುಕ್ಕಿಂಗ್ ಕೌಂಟರ್’ ಆರಂಭಿಸಲಾಯಿತು.
ಪುತ್ತೂರು ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕ ರವೀಂದ್ರ ನಾಯ್ಕ ಎಂ. ಅವರು ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕೌಂಟರ್ ಉದ್ಘಾಟಿಸಿದರು.
ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಎಂಟು ತಾಲೂಕುಗಳಿದ್ದು, ಸುಮಾರು 390 ಅಂಚೆ ಕಚೇರಿಗಳು ಹಾಗೂ 2,200ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎಂಟು ತಾಲೂಕುಗಳ ಪೈಕಿ ಇಂತಹ ಹೊಸ ಮಾದರಿಯ ಸೇವೆಯನ್ನು ಮೊದಲಿಗೆ ಬಂಟ್ವಾಳದಲ್ಲಿ ಆರಂಭಿಸಲಾಗಿದೆ ಎಂದರು.
ಅಂಚೆ ಇಲಾಖೆಯಲ್ಲಿ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಆಧುನಿಕ ಸೇವೆಗಳು ಲಭ್ಯವಿವೆ. ಸಾರ್ವಜನಿಕರ ಅಮೂಲ್ಯ ಸಮಯ ಉಳಿಸುವ ಉದ್ದೇಶದಿಂದ ಹೊಸ ಸಾಫ್ಟ್‌ವೇರ್‌ಗಳನ್ನೂ ಪರಿಚಯಿಸಲಾಗುತ್ತಿದೆ. ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ಅಂಚೆ ಸೇವೆಗಳನ್ನು ಇನ್ನಷ್ಟು ಸರಳ ಹಾಗೂ ಜನಸ್ನೇಹಿಯಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಭಾರತದಲ್ಲಿ 1,64,999 ಅಂಚೆ ಕಚೇರಿಗಳಿದ್ದು, ಅವುಗಳಲ್ಲಿ ಸುಮಾರು ಶೇ.80ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಜನರಿಗೂ ಅಂಚೆ ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವಲ್ಲಿ ಭಾರತೀಯ ಅಂಚೆ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ರಾಜೇಂದ್ರ ಪ್ರಸಾದ್ ಮಾತನಾಡಿ ವಕೀಲರಿಗೆ ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಅಂಚೆ ಕಚೇರಿಗೆ ತೆರಳಿ ಸೇವೆ ಪಡೆಯುವುದು ಹಲವು ಸಂದರ್ಭಗಳಲ್ಲಿ ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ವಕೀಲರ ಸಂಘದ ಕಚೇರಿಯಲ್ಲೇ ಕೌಂಟರ್ ಆರಂಭಿಸಿರುವುದು ಶ್ಲಾಘನೀಯ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಎಂಎಫ್‌ಸಿ ಸೌಂದರ್ಯ ಎಂ. ಗೌರವ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ಟಾ ಎಂ. ವಹಿಸಿದ್ದರು.
ಪುತ್ತೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಮೋಹನ್ ಬಿ., ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್, ಉಪಾಧ್ಯಕ್ಷ ದಯಾನಂದ ರೈ, ಜಂಟಿ ಕಾರ್ಯದರ್ಶಿ ಅಕ್ಷತಾ ಶೆಟ್ಟಿ, ಖಜಾಂಚಿ ಜೆಸಿಂತಾ ಕ್ರಾಸ್ತಾ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ನರೇಂದ್ರನಾಥ ಭಂಡಾರಿ ಸ್ವಾಗತಿಸಿ ವಂದಿಸಿದರು.