ಬಂಟ್ವಾಳ: ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ (೪೮) ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ ರಾತ್ರಿ ಮನೆ ಸಮೀಪ ತುಂಬಿ ಹರಿಯುತ್ತಿರುವ ತೋಡಿನ ಬಳಿ ಕಂಡುಬಂದಿದ್ದು ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಶೋಧ ಕಾರ್ಯ ನಡೆಯುತ್ತಿತ್ತು. ಇದೀಗ ಅರಳ ಗ್ರಾಮದ ಪಂಬದಗಡ್ಡೆ ಎಂಬಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಶನಿವಾರ ರಾತ್ರಿ ಸಂಭವಿಸಿದ ಘಟನೆಯ ಬಳಿಕ ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ತಂಡಗಳು ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಮಳೆ ಹಾಗೂ ನೀರಿನ ಹರಿವು ಹೆಚ್ಚಿದ್ದ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದರೂ ಶೋಧ ಮುಂದುವರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪದ ನೀರಿನಲ್ಲಿ ಜೀವನ್ ಪಿಂಟೋ ಅವರ ಮೃತದೇಹ ಪತ್ತೆಯಾಗಿದೆ .
ಮೃತದೇಹವನ್ನು ಮೇಲಕ್ಕೆತ್ತಿ ಮುಂದಿನ ಕಾನೂನು ಪ್ರಕ್ರಿಯೆಗಾಗಿ ಸಂಬಂಧಿತ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ನದಿ, ಹೊಳೆ ಹಾಗೂ ತೋಡುಗಳ ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರಕರಣದ ಕುರಿತು ಕುರಿತು ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜೀವನ್ ಪಿಂಟೋ ಅವರು ತಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ಮಾವನ ಮನೆಗೆ ಆಗಸ್ಟ್ ೧ರ ರಾತ್ರಿ ಸುಮಾರು ೭.೩೦ರ ವೇಳೆ ನಡೆದುಕೊಂಡು ಹೋಗುವುದಾಗಿ ಹೊರಟಿದ್ದರು.
ಧಾರಾಕಾರ ಮಳೆ ಹಾಗೂ ಕತ್ತಲು ಇರುವ ಹಿನ್ನೆಲೆಯಲ್ಲಿ ಟಾರ್ಚ್ ಹಿಡಿದುಕೊಂಡು ತೋಡಿನ ಮೇಲೆ ಹಾಕಲಾಗಿರುವ ಮಿನಿಸೇತುವೆ ಯ ಮೇಲೆ ನಡೆದುಕೊಂಡು ಇನ್ನೊಂದು ಬದಿಗೆ ತಲುಪಬೇಕಿತ್ತು. ಆದರೆ ಅವರು ಎಷ್ಟು ಹೊತ್ತಾದರೂ ತಲುಪದ ಹಿನ್ನೆಲೆ ಮಾಹಿತಿ ತಿಳಿದು ಹುಡುಕಾಟ ಆರಂಭಿಸಿದಾಗ, ಅವರ ಚಪ್ಪಲಿ ಮತ್ತು ಟಾರ್ಚ್ ತೋಡಿನಲ್ಲಿ ಪತ್ತೆಯಾಗಿದೆ. ಸಮೀಪವರ್ತಿಗಳನ್ನೆಲ್ಲಾ ವಿಚಾರಿಸಿ, ಹುಡುಕಾಟ ನಡೆಸಿದಾಗ ಅವರು ಕಂಡುಬಾರದ ಹಿನ್ನೆಲೆಯಲ್ಲಿ ತೋಡಿನಲ್ಲಿ ಕಾಲುಜಾರಿ ಬಿದ್ದಿರಬಹುದೇ ಎಂಬ ಶಂಕೆಯಿಂದ ಹುಡುಕಾಟ ಆರಂಭಿಸಲಾಯಿತು. ಕೂಡಲೇ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಎನ್.ಡಿ.ಆರ್.ಎಫ್. ತಂಡಕ್ಕೂ ಕರೆ ಹೋಯಿತು. ಸ್ಥಳೀಯರೂ ಸೇರಿ ರಾತ್ರಿಯಿಂದ ಭಾನುವಾರ ಸಂಜೆಯವರೆಗೂ ಹುಡುಕಾಟ ನಡೆಸಲಾಗಿತ್ತು. ಇದೀಗ ಸೋಮವಾರ ಅವರು ಶವವಾಗಿ ಪತ್ತೆಯಾಗಿದ್ದಾರೆ.