?
ಪ್ರಸ್ತುತ ಬಂಟ್ವಾಳ ಪುರಸಭೆ ಜನಪ್ರತಿನಿಧಿಗಳ ಆಡಳಿತದಲ್ಲಿಲ್ಲ. ಏನಿದ್ದರೂ ಅಧಿಕಾರಿಗಳದ್ದೇ ಕಾರುಬಾರು. ಆದರೆ ಮುಖ್ಯಾಧಿಕಾರಿಯೊಬ್ಬರನ್ನು ಹೊರತುಪಡಿಸಿದರೆ, ಪರಿಸರ ಎಂಜಿನಿಯರ್, ಆರೋಗ್ಯ ನಿರೀಕ್ಷಕ, ಎಂಜಿನಿಯರ್, ಅಕೌಂಟೆಂಟ್ ಸೇರಿ ಬಹುತೇಕ ಹುದ್ದೆಗಳು ಭರ್ತಿಯಾಗಿಲ್ಲ. ಇದು ಕಚೇರಿ ಒಳಗಿನ ಸ್ಥಿತಿಯಾದರೆ, ಹೊರಗಿನ ಸ್ಥಿತಿ ನೋಡಬೇಕಿದ್ದರೆ, ಗೂಡಿನಬಳಿಯಿಂದ ಬಂಟ್ವಾಳ ಬಸ್ತಿಪಡ್ಪುವಿಗೆ ಹೋಗುವ ಕಂಚಿಕಾರಪೇಟೆಗೆ ಹೋದರೆ ಸಾಕು.
ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ರಸ್ತೆಯಾದ ಮೇಲೆ ಅಭಿವೃದ್ಧಿಗೊಂಡ ಸೇತುವೆಯಲ್ಲಿ ನಿಂತರೂ ಸಾಕು. ಕಂಚಿಕಾರಪೇಟೆಯಲ್ಲಿ ಹಾಕಿದ ತ್ಯಾಜ್ಯದ ದುರ್ನಾತ ಮೂಗಿಗೆ ಬಡಿಯುತ್ತದೆ. ನೇತ್ರಾವತಿ ನದಿಯ ದಡದಲ್ಲೇ ಹೀಗಾದರೆ ಇನ್ನು ಉಳಿದ ವಿಚಾರ ಯಾರಲ್ಲಿ ಹೇಳುವುದು ಎಂಬ ಸ್ಥಿತಿ ಸಾರ್ವಜನಿಕರದ್ದು.
ಸಮಸ್ಯೆಗಳ ಆಗರ:
ಹಾಗೆ ನೋಡಿದರೆ, ಬಂಟ್ವಾಳ ಪುರಸಭೆಯ ಕಸ ಸಂಗ್ರಹ ವಾಹನಗಳಲ್ಲಿ ಅರ್ಧಾಂಶ ಕೈಕೊಟ್ಟಿವೆ. ಉಳಿದದ್ದರಲ್ಲೇ ಅಡ್ಜಸ್ಟ್ ಮಾಡಲಾಗುತ್ತಿದೆ. ಹೀಗಾಗಿ ಸಮರ್ಪಕ ಕಸ ವಿಲೇವಾರಿಯಾಗುವುದಿಲ್ಲ ಎಂದು ಕಳೆದ ಅವಧಿಯಲ್ಲಿ ಪುರಸಭೆ ಸದಸ್ಯರಾಗಿದ್ದವರೇ ದೂರುತ್ತಿದ್ದಾರೆ.
ವಾಹನಗಳ ದುರಸ್ತಿ, ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಹಾಗೂ ಸ್ವಚ್ಛತಾ ವ್ಯವಸ್ಥೆ ಸುಧಾರಣೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ತ್ಯಾಜ್ಯ ಹೂಳೆತ್ತುವಿಕೆಯಿಂದ ತೊಡಗಿ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಸಮಸ್ಯೆ ಕೇಳಲು ಅಧಿಕಾರಿಗಳೇ ಇಲ್ಲ ಎಂದು ದೂರಲಾಗುತ್ತಿದೆ.
ಬಂಟ್ವಾಳ ಪುರಸಭೆಯ ಕೆಲಸ ಕಾರ್ಯಗಳು ಹೇಗಾಗುತ್ತಿದೆ, ಸಾರ್ವಜನಿಕ ಸಮಸ್ಯೆಗಳೇನು, ಆಡಳಿತಾತ್ಮಕ ತೊಂದರೆಗಳೇನು, ಸಿಬ್ಬಂದಿ ನಿರ್ವಹಣೆ ಯಾವ ರೀತಿ ಆಗುತ್ತಿದೆ, ಜನರು ಏನು ಬಯಸುತ್ತಾರೆ ಎಂಬ ವಿಚಾರಗಳ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಆಡಳಿತಾಧಿಕಾರಿ ಆಗಿರುವ ಸಹಾಯಕ ಕಮೀಷನರ್ ಮೀನಾಕ್ಷಿ ಆರ್ಯ ಅವರನ್ನು ಬಂಟ್ವಾಳ ಪುರಸಭೆಗೆ ಕರೆಸಿ, ಸಭೆ ನಡೆಸಬೇಕು. ಅಧಿಕಾರಿಗಳು ಪುರಸಭೆಯ ವ್ಯಾಪ್ತಿಯಿಡೀ ಸಂಚರಿಸಿ ಗ್ರೌಂಡ್ ರಿಯಾಲಿಟಿ ಗಮನಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆಗಬೇಕಾಗಿರುವುದು
1.ಬೀದಿ ದೀಪ ವ್ಯವಸ್ಥೆ ಸಮರ್ಪಕ ನಿರ್ವಹಣೆ
2. ಕಾಂಪ್ಯಾಕ್ಟ್ ವಾಹನ ಸಹಿತ ತ್ಯಾಜ್ಯ ಸಂಗ್ರಹಣಾ ವಾಹನ ರಿಪೇರಿ
3. ಪುರಸಭೆ ಎಲ್ಲ ವಾರ್ಡ್ ಸಮಸ್ಯೆ ಆಲಿಸಲು ಸಹಾಯವಾಣಿ
4. ಪರಿಸರ ಎಂಜಿನಿಯರ್ ಸಹಿತ ಸಿಬ್ಬಂದಿ ನೇಮಕ
4. ನೀರಿನ ಸ್ಥಾವರ ಮಾಪನ ಸಹಿತ ತೆರಿಗೆ ಸಂಗ್ರಹ