ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದಲ್ಲಿರುವ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದಷ್ಟೇ ದೇವಸ್ಥಾನ ನವೀಕರಣಗೊಂಡು ಅದ್ದೂರಿಯ ಬ್ರಹ್ಮಕಲಶೋತ್ಸವ ನೆರವೇರಿತ್ತು. ಸಿಡಿಲಾಘಾತದಿಂದ ಅಪಾರ ಆರ್ಥಿಕ ನಷ್ಟ ಸಂಭವಿಸಿದೆ. ಸಂಜೆ ಸುಮಾರು 4ರಿಂದ 4.30ರ ವೇಳೆ ಸುರಿದ ಗಾಳಿ, ಮಳೆ ವೇಳೆ ಸಿಡಿಲು ದೊಡ್ಡ ಪ್ರಮಾಣದಲ್ಲಿ ಬಂದೆರಗಿದೆ. ಇದರ ರಭಸಕ್ಕೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗರ್ಭಗುಡಿಯ ಮೇಲಿನ ಪ್ರಾಕಾರದ ಶಿಲಾಕಲ್ಲು ಛಿದ್ರಗೊಂಡಿದ್ದು, ನೆಲಕ್ಕೆರಗಿದೆ.