ಮುರ್ಡೇಶ್ವರದಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಹೆರಿಗೆ ನೋವು ಉಂಟಾದ ವೇಳೆ ತುರ್ತು ವೈದ್ಯಕೀಯ ನೆರವು ಒದಗಿಸಿ, ಶಿಶುವಿನ ಸುರಕ್ಷಿತ ಜನನಕ್ಕೆ ರೈಲ್ವೆ ಸಿಬ್ಬಂದಿ ಹಾಗೂ ಸಹಪ್ರಯಾಣಿಕರು ನೆರವಾದರು.
ಬಂಟ್ವಾಳ ರೈಲು ನಿಲ್ದಾಣಕ್ಕೆ ಸಂಜೆ 19:22 ಗಂಟೆಗೆ ಆಗಮಿಸಿದಾಗ, ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಪೊನ್ನಮ್ಮ ಅವರು ಗಂಭೀರ ಸ್ಥಿತಿಯಲ್ಲಿ ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡುಬಂದಿತು. ತಕ್ಷಣವೇ ರೈಲ್ವೆ ಸಿಬ್ಬಂದಿ ತುರ್ತು ವೈದ್ಯಕೀಯ ಸೇವೆಗಳಿಗೆ ಮಾಹಿತಿ ನೀಡಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು.ಆಂಬುಲೆನ್ಸ್ ಬರುವುದಕ್ಕೂ ಮುನ್ನವೇ, ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು. ಎಸ್ಕಾರ್ಟಿಂಗ್ ಸಿಬ್ಬಂದಿಗಳಾದ ಅರುಣ ಎಸ್. ಎಸ್., ಶಂಕರಮೂರ್ತಿ ಸಮಯೋಚಿತ ನೆರವು ನೀಡಿದರು ಎಂದು ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ
ಹೆರಿಗೆಯ ನಂತರ ತಾಯಿ ಮತ್ತು ನವಜಾತ ಶಿಶುವನ್ನು ಆಂಬುಲೆನ್ಸ್ ಮೂಲಕ ಬಂಟ್ವಾಳದ ಸೋಮಯಾಜಿ ಖಾಸಗಿ ಆಸ್ಪತ್ರೆಗೆ ಸುರಕ್ಷಿತವಾಗಿ ಸಾಗಿಸಲಾಯಿತು. ತಾಯಿ ಮತ್ತು ಮಗು ಇಬ್ಬರೂ ಸ್ಥಿರ ಸ್ಥಿತಿಯಲ್ಲಿದ್ದು, ಮಗು ಅವಧಿಗೂ ಮುಂಚೆ ಜನಿಸಿದ ಕಾರಣ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ.