ಸಾಂಸ್ಕೃತಿಕ

ಬಹುಮುಖ ಪ್ರತಿಭೆ ವಿದುಷಿ ಸಹನಾ ಎಂ. ಶೆಟ್ಟಿ ಭರತನಾಟ್ಯ ರಂಗಪ್ರವೇಶ

| ಕಲೆಯಲ್ಲಿನ ಏಕಾಗ್ರತೆ ಮತ್ತು ಸಮರ್ಪಣಾ ಭಾವ ಸಾಧನೆಯ ಬೆನ್ನೆಲುಬು: ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ

ಜಾಹೀರಾತು

ಬಂಟ್ವಾಳದ ನರ್ವಲ್ದಡ್ಡ ನಿವಾಸಿ ಮೋಹನ್ ಶೆಟ್ಟಿ ನರ್ವಲ್ದಡ್ಡ ಮತ್ತು ಹರಿಣಾಕ್ಷಿ ಎಂ ಶೆಟ್ಟಿ ದಂಪತಿ ಪುತ್ರಿ ವಿದುಷಿ ಸಹನಾ ಎಂ. ಶೆಟ್ಟಿ ನರ್ವಲ್ದಡ್ಡ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ತುಂಬೆಯ ಬಂಟರ ಭವನದಲ್ಲಿ ನಡೆಯಿತು

ಪುತ್ತೂರಿನ ವಿಶ್ವಕಲಾನಿಕೇತನ ನಿರ್ದೇಶಕರು ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆ ವಿದುಷಿ ನಯನ ವಿ. ರೈ ನಟರಾಜ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ದೀಪ ಪ್ರಜ್ವಲಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.

ಮುಖ್ಯ ಅಭ್ಯಾಗತರಾಗಿದ್ದ ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಕಲೆ ಎಂಬುದು ದೈವದತ್ತವಾದ ಕೊಡುಗೆ. ಭರತನಾಟ್ಯದಂತ ಭಾರತೀಯ ಕಲೆ ಈ ನೆಲದ ಸಾಂಸ್ಕೃತಿಕ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಶಾಸ್ತ್ರೀಯ ಕಲೆಗಳು ಮನುಷ್ಯನ ಮನಸ್ಸನ್ನು ಕೇಂದ್ರೀಕರಿಸುವ ಜೊತೆಗೆ ಆಧ್ಯಾತ್ಮಿಕ ಉನ್ನತಿಯತ್ತ ಕೊಂಡೊಯ್ಯುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ಯುವ ಪೀಳಿಗೆ ಭಾರತೀಯ ಪರಂಪರೆಯನ್ನು ಬೆಳೆಸಿ ಪ್ರೇರೆಪಿಸಿತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ  ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಮಾತನಾಡಿ, ಕಲೆಗೆ ಯಾವುದೇ ಜಾತಿ, ಮತದ ಹಂಗಿಲ್ಲ. ಕಲೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗ. ಇದಕ್ಕೆ ಸರ್ವರನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದರು.

ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ  ಜಗನ್ನಾಥ ಚೌಟ ವಹಿಸಿದ್ದರು.ಕಲಾ ಪ್ರದರ್ಶನದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿಸಹನಾ ತನ್ನ ಗುರುಗಳಾದ ಮಡಂತ್ಯಾರಿನ ದೇವಿ ಕಿರಣ್ ಕಲಾನಿಕೇತನ್  ನಿರ್ದೇಶಕಿಯಾದ ವಿದುಷಿ ಸ್ವಾತಿ ಜಯರಾಮ್ ಮತ್ತು ವಿದುಷಿ ಪೃಥ್ವಿ ಸತೀಶ್ ಅವರಿಗೆ ಭಕ್ತಿಪೂರ್ವಕವಾಗಿ ಗುರುವಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ಸಂಯೋಜಕರಾದ ಮೋಹನ್ ಶೆಟ್ಟಿ, ಹರಿಣಾಕ್ಷಿ ಮತ್ತು ಮೋಕ್ಷಿತ್ ಎಂ. ಶೆಟ್ಟಿ ಉಪಸ್ಥಿತರಿದ್ದರು. ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಡಾ. ಮಂಜುಳಾ ಶೆಟ್ಟಿ ನಿರೂಪಿಸಿ,  ಪುನೀತ್ ಶೆಟ್ಟಿ ವಂದಿಸಿದರು.

ಬಹುಮುಖ ಪ್ರತಿಭೆ ವಿದುಷಿ ಸಹನಾ ಎಂ. ಶೆಟ್ಟಿ :

 ಸಹನಾ ಅವರು ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಂಬಿಎ (MBA) ಪದವಿಧರೆ. ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ‘ವಿದುಷಿ’ ಪದವಿ ಪಡೆದಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಬಾರಿ ವಿಜೇತರಾಗಿದ್ದು, ರಾಜ್ಯದ ವಿವಿಧೆಡೆ 200ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿದ್ದಾರೆ.

ಕರಾಟೆಯಲ್ಲಿ ಅಂತರಾಷ್ಟ್ರೀಯ ಸಾಧನೆ:

5ನೇ ವಯಸ್ಸಿನಲ್ಲೇ ಕರಾಟೆ ತರಬೇತಿ ಆರಂಭಿಸಿದ ಇವರು ಕರಾಟೆಯಲ್ಲಿ ‘ಬ್ಲಾಕ್ ಸೆಕೆಂಡ್ ಡ್ಯಾನ್ ಬೆಲ್ಟ್’ ಹೊಂದಿದ್ದಾರೆ. ನೇಪಾಳ ಮತ್ತು ಪುಣೆಯಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಸಾಧಕಿ. ಪಂಜಾಬ್, ಹರಿಯಾಣ, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 260ಕ್ಕೂ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸತತ 7 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಿರುವ ಇವರು, ಪ್ರಸ್ತುತ ರೆಫರಿಯಾಗಿ ಹಾಗೂ ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ:

ಸಿರಿಗುಂದದಪಾಡಿಯ ಶ್ರೀ ಬ್ರಹ್ಮಲಿಂಗೇಶ್ವರ ಕುಣಿತ ಭಜನಾ ಮಂಡಳಿಯ ಮೂಲಕ 30ಕ್ಕೂ ಹೆಚ್ಚು ಮಕ್ಕಳ ತಂಡವನ್ನು ಕಟ್ಟಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ, ಜಾನಪದ ಮತ್ತು ವೆಸ್ಟರ್ನ್ ನೃತ್ಯಗಳಲ್ಲೂ ಆಸಕ್ತಿ ಹೊಂದಿರುವ ಇವರು, ವಿಶ್ವ ಬಂಟರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ‘ಕಾಳಿ’ ಪಾತ್ರದ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಈಗಾಗಲೇ ಅನೇಕ ಗೌರವಗಳು ಸಂದಿವೆ: ಭಾರತ ಕಲಾರತ್ನ ಪ್ರಶಸ್ತಿ,  ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಷನಲ್ ಪ್ರಶಸ್ತಿ, ಶ್ರೇಷ್ಠ ಕಲಾ ವಿಭೂಷಣ ಪ್ರಶಸ್ತಿ, ತೌಳವ ಕುಮಾರಿ ಪ್ರಶಸ್ತಿ ಲಭಿಸಿದೆ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.