ಬಂಟ್ವಾಳ

ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸುರಕ್ಷಿತ ಪೇ ಪಾರ್ಕಿಂಗ್ , ಪಟ್ಟಣದ ಸಂಚಾರದಟ್ಟಣೆಗೆ ಪರಿಹಾರ

KSRTC BUSSTAND

ದ್ವಿಚಕ್ರ ವಾಹನಗಳಿಗೆ 4 ಗಂಟೆಗೆ 5 ರೂ, ಅದಕ್ಕಿಂತ ಹೆಚ್ಚು ಗಂಟೆ ಅಥವಾ ಒಂದು ದಿನವಾದರೆ 10 ರೂ. ನಾಲ್ಕು ಚಕ್ರದ ವಾಹನಗಳಿಗೆ 4 ಗಂಟೆಗೆ 10 ರೂ ಅದಕ್ಕಿಂತ ಹೆಚ್ಚು ಅವಧಿ ಅಥವಾ ಒಂದು ದಿನಕ್ಕೆ 20 ರೂ.

ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಒಳಗೆ ಖಾಸಗಿ ನಿರ್ವಹಣೆಯಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಂಡಿದ್ದು, ಇಲ್ಲಿ ನಿರ್ವಹಿಸುತ್ತಿರುವ ಸಿಬ್ಬಂದಿ ಸದ್ಯಕ್ಕೆ ವಿಧಿಸುತ್ತಿರುವ ಶುಲ್ಕ ಇದು.

2017ರಲ್ಲಿ ಉದ್ಘಾಟನೆಗೊಂದ ದಶಕೋಟಿ ವೆಚ್ಚದ ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಾರ್ವಜನಿಕ ಬಳಕೆಯಿಂದ ಸ್ವಲ್ಪ ದೂರವೇ ಉಳಿದಿತ್ತು. ಕೇವಲ ಸರಕಾರಿ ಬಸ್ ಗಳ ಟಿ.ಸಿ. ಎಂಟ್ರಿಗಷ್ಟೇ ಎಂಬಂತಿದ್ದ ಈ ನಿಲ್ದಾಣದಲ್ಲಿ ಸುಮಾರು 9 ವರ್ಷಗಳ ಬಳಿಕ ನಿಜವಾದ ಚಟುವಟಿಕೆಗಳು ಆರಂಭಗೊಂಡಿವೆ. ಇಲ್ಲಿನ ತಳ ಅಂತಸ್ತಿನಲ್ಲಿ ಪೇ ಪಾರ್ಕಿಂಗ್ ಸೌಲಭ್ಯ ಆರಂಭಗೊಂಡಿದೆ. ಸದ್ಯಕ್ಕೆ ಏಜನ್ಸಿಯು ನೇಮಿಸಿದ ಸಿಬ್ಬಂದಿಗೆ ಕನ್ನಡ, ತುಳು ಭಾಷೆ ಬರುವುದಿಲ್ಲ.

ಜಾಹೀರಾತು

ಯಾರಿಗೆಲ್ಲ ಅನುಕೂಲ:

ಬೆಳಗ್ಗೆಯೇ ಬಿ.ಸಿ.ರೋಡಿಲ್ಲಿ ಸಿಕ್ಕಸಿಕ್ಕಲ್ಲಿ ವಾಹನ ನಿಲ್ಲಿಸಿ ಬೇರೆ ಊರಿಗೆ ಉದ್ಯೋಗಕ್ಕೆ ಹೋಗಿ, ಬಳಿಕ ಸಂಜೆ ವಾಹನ ವಾಪಸ್ ತೆಗೆಯಲು ಪರದಾಡುವವರಿಗೆ ಇದು ಉತ್ತಮ ಅವಕಾಶ. ಹಾಗೆಯೇ ಬಿ.ಸಿ.ರೋಡ್ ಪೇಟೆಗೆ ನಾನಾ ಕೆಲಸ ಕಾರ್ಯಗಳಿಗೆ ಆಗಮಿಸುವವರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು, ಇಲ್ಲಿ ವಾಹನ ನಿಲ್ಲಿಸಿ, ತಮ್ಮ ಕೆಲಸ ಮುಗಿಸಿ ಬಳಿಕ ವಾಹನ ತೆಗೆದುಕೊಂಡು ಹೋಗಬಹುದು. ಇದು ಸುರಕ್ಷಿತವೂ ಹೌದು. ಸಿಸಿ ಟಿವಿ ಕಣ್ಗಾವಲೂ ಇದಕ್ಕಿದೆ. ಬಿಸಿಲು ಮಳೆಯಿಂದ ರಕ್ಷಣೆಯೂ ಇದಕ್ಕಿದೆ.

ಬೆಳಗ್ಗೆ 6ರಿಂದ 10ವರೆಗೆ ಓಪನ್:

ಬೆಳಗ್ಗೆ 6 ಗಂಟೆಗೆ ಪಾರ್ಕಿಂಗ್ ವ್ಯವಸ್ಥೆ ತೆರೆದುಕೊಳ್ಳುತ್ತದೆ. ರಾತ್ರಿ 10ರವರೆಗೆ ಇದು ಇರುತ್ತದೆ. ಆ ಅವಧಿಯಲ್ಲಿ ನಿಮ್ಮ ವಾಹನ ಇಲ್ಲಿ ನಿಲುಗಡೆಗೊಳಿಸಬಹುದು ಹಾಗೂ ತೆಗೆದುಕೊಂಡು ವಾಪಸ್ ಹೋಗಬಹುದು. ಆದರೆ ರಾತ್ರಿ 10ರ ಬಳಿಕ ವಾಹನವನ್ನು ಕೊಡಲಾಗುವುದಿಲ್ಲ. ಮರುದಿನ ಬಂದು ತೆಗೆದುಕೊಂಡು ಹೋಗಬೇಕು.

ಪುರಸಭೆ ಪೇ ಪಾರ್ಕಿಂಗ್ ಪ್ರಸ್ತಾಪ ನೆನೆಗುದಿಗೆ

ಸಾಕಷ್ಟು ಬಾರಿ ಪುರಸಭೆ ಸಾಮಾನ್ಯ ಸಭೆಗಳಲ್ಲಿ ಬಿ.ಸಿ.ರೋಡಿನ ಪಾರ್ಕಿಂಗ್ ವಿಚಾರ ಚರ್ಚೆಗೆ ವಸ್ತುವಾಗುತ್ತಿತ್ತು. ಒಂದು ಹಂತದಲ್ಲಿ ಪೇ ಪಾರ್ಕಿಂಗ್ ಮಾಡುವ ಪ್ರಸ್ತಾಪವೂ ಇತ್ತು. ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿ ಅವಕಾಶವೂ ಇತ್ತು. ಆದರೆ ಅದೆಲ್ಲವೂ ಈಗ ಇತಿಹಾಸ. ಸದ್ಯಕ್ಕಂತೂ ಪುರಸಭೆ ಪೇ ಪಾರ್ಕಿಂಗ್ ಮಾಡುವ ನಿರ್ಧಾರ ಕೈಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಕೈಕುಂಜ ರಸ್ತೆಯೂ ಹದಗೆಟ್ಟು ಹೋಗಿದೆ. ಇಲ್ಲಿನ ಫುಟ್ ಪಾತ್ ಅನ್ನು ನಡೆದುಕೊಂಡು ಹೋಗುವವರಿಗೆ ಒದಗಿಸಿದರೆ ಅಷ್ಟೇ ಸಾಕು ಎನ್ನುತ್ತಾರೆ ಸಾರ್ವಜನಿಕರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.