PHOTO CREDIT: S.G.DATTA URIMAJALU
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಾಶಿವರಾತ್ರಿ ಉತ್ಸವ ‘ಶಿವಾರ್ಪಣಂ’ ಕಾರ್ಯಕ್ರಮ ಫೆ.15ರ ಭಾನುವಾರ ನಡೆಯಿತು.
ಪೂರ್ವಾಹ್ನ ಮಹಾಗಣಪತಿ ಹೋಮ, ರುದ್ರಾಭಿಷೇಕ, ಸೀಯಾಳಾಭಿಷೇಕ, ಬಲವಾಡು ಕೂಟ, ಸಮಾರಾಧನೆ ಹಾಗೂ ಸೂರ್ಯಾಸ್ತದಿಂದ ಸೋಮವಾರ ಸೂರ್ಯೋದಯದ ತನಕ ಭಜನಾಸೇವೆ ರಾತ್ರಿ ಶ್ರೀ ದೇವರಿಗೆ ಏಕಾದಶರುದ್ರಾಭಿಷೇಕ,ಪಂಚಾಮೃತಾ ಭಿಷೇಕ ಹಾಗೂ ಶಿವರಾತ್ರಿ ವಿಶೇಷ ಪೂಜೆ ನಡೆಯಿತು.
ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ನಡೆಯಲಿರುವ ಶ್ರೀದೇವರ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಕಾರ್ಯಕ್ರಮದ ಪೂರ್ವಭಾವಿ ಸುಧರ್ಮ ಸಭೆ ಈ ಸಂದರ್ಭ ನಡೆಯಿತು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಈ ಸಂದರ್ಭ ಆಶೀರ್ವಚನ ನೀಡಿ, ಸಮಸ್ತ ಹಿಂದು ಸಮಾಜಕ್ಕೆ ಈ ಮಣ್ಣು ಚೈತನ್ಯಶೀಲವಾಗಲಿ ಎಂದು ಹಾರೈಸಿದರು. ಹಿಂದು ಸಮಾಜದಲ್ಲಿ ಇರುವ ಜಾತ್ಯಾತೀತ ವ್ಯವಸ್ಥೆ ಬಲಗೊಳ್ಳಬೇಕು. ಹಿಂದು ಸಮಾಜವನ್ನು ಜೋಡಿಸುವ ಕೆಲಸ ಪದ್ಯಾಣದಲ್ಲಿ ಆಗುತ್ತಿದೆ ಎಂದರು.
ಬೆಂಗಳೂರಿನ ಹಿರಿಯ ನ್ಯಾಯವಾದಿ ಶ್ಯಾಮಸುಂದರ್ ಎಂ.ಎಸ್. ಮಾತನಾಡಿ, ವಾಣಿಜ್ಯೀಕರಣವಾಗುತ್ತಿರುವ ಈ ಸನ್ನಿವೇಶದಲ್ಲಿ ಪದ್ಯಾಣದ ಸನ್ನಿಧಿಯಲ್ಲಿ ಭಗವಂತನ ಅನುಭೂತಿ ದೊರಕುತ್ತಿದೆ. ಧಾರ್ಮಿಕ ಶ್ರದ್ಧೆ, ಆಚಾರ, ವಿಚಾರಗಳನ್ನು ಅನುಸರಿಸುವವರ ಪೈಕಿ ಕನ್ನಡಿಗರು ಮುಂಚೂಣಿಯಲ್ಲಿರುವ ಹಿನ್ನೆಲೆ ದೇಶದ ನಾನಾ ಧಾರ್ಮಿಕ ಕೇಂದ್ರಗಳಲ್ಲಿ ಕರ್ನಾಟಕದ ಜನತೆ ಇರುವುದನ್ನು ಕಾಣಬಹುದು. ಪದ್ಯಾಣದಲ್ಲೊಂದು ಶಕ್ತಿಯ ಸೆಳೆತವಿದೆ. ಇಲ್ಲಿಗೆ ಸದಾ ಸೇವೆ ದೊರಕುವ ಶಕ್ತಿಯನ್ನು ಭಗವಂತ ಒದಗಿಸಲಿ ಎಂದರು.
ಬೆಂಗಳೂರಿನ ಉದ್ಯಮಿ ಮುರಳಿ ಶ್ರೀನಿವಾಸಮೂರ್ತಿ ಮಾತನಾಡಿ, ಪ್ರಕೃತಿ ಮಾತೆಯ ಮಡಿಲಲ್ಲಿ ಕ್ಷೇತ್ರ ಇರುವ ಹಿನ್ನೆಲೆಯಲ್ಲಿ ನಿಜಕ್ಕೂಈಶ್ವರನ ಹೂದೋಟವಾಗಿದೆ. ಈ ಕ್ಷೇತ್ರ ಬೆಳಗಲಿ ಎಂದು ಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅರುಣ ಶ್ಯಾಮ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಮಸ್ತ ಹಿಂದು ಸಮಾಜದ ಆರಾಧನಾ ಕ್ಷೇತ್ರವಾಗಿ ವಿಸ್ತರಣೆಗೆ ಬ್ರಹ್ಮಕಲಶೋತ್ಸವ ಅವಕಾಶ ನೀಡುತ್ತದೆ. ಕ್ಷೇತ್ರದ ಅಭಿವೃದ್ಧಿ ಗೆ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮ ಇದರ ಹಿಂದೆ ಅಡಗಿದೆ. ಶಿವನಿಗೆ ಪ್ರೀತ್ಯರ್ಥವಾಗಿ ದೇಶದ ಪ್ರಮುಖ ಹನ್ನೊಂದು ನದಿಗಳ ಪುಣ್ಯತೀರ್ಥದ ಅಭಿಷೇಕ, ಒಂದು ದಿವಸ ಒಂದು ಗ್ರಾಮಕ್ಕೆ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗುವುದು. ಬ್ರಹ್ಮಕಲಶೋತ್ಸವ ಮೂಲಕ ಹಿಂದು ಸಮಾಜದ ದೊಡ್ಡ ಶಕ್ತಿಕೇಂದ್ರವಾಗಿ ಪದ್ಯಾಣ ಬೆಳೆಯುವಂತಾಗಬೇಕು ಎಂದು ಆಶಿಸಿದರು.
ಈ ಸಂದರ್ಭ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪದ್ಯಾಣ ರಘುರಾಮ ಕಾರಂತ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಈಶಾನ್ಯ ಪದ್ಯಾಣ ಸಹಿತ ನಾನಾ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ ವಂದಿಸಿದರು. ಡಾ. ಗೋವಿಂದಪ್ರಸಾದ್ ಕಜೆ ಕಾರ್ಯಕ್ರಮ ನಿರ್ವಹಿಸಿದರು.
ವೈಭವಿ, ಶ್ರೀರಕ್ಷಾ, ಪ್ರಣವಿ ಪ್ರಾರ್ಥಿಸಿದರು. ಇದಕ್ಕೂ ಮೊದಲು ಪದಯಾನ ತಂಡದಿಂದ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ನಿರ್ದೇಶನದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಿತು.
| ಫೆಬ್ರವರಿ 20ರಂದು ಪ್ರಶಸ್ತಿ ಪ್ರದಾನ (more…)