ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಜಾಗತಿಕ ಬಿಲ್ಲವರ ಕ್ರೀಡೋತ್ಸವ 2026 ಜನವರಿ 18ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿದೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಈ ವಿಷಯದ ಕುರಿತು ಮಾಹಿತಿ ನೀಡಿದರು.
ಈಗಾಗಲೇ ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ಅವರು ಲೋಗೊ ಬಿಡುಗಡೆಮಾಡಿದ್ದಾರೆ. ಸಮಾಜದ ಯುವಕರನ್ನು ಸಂಘಟಿಸಿ, ಮುಖ್ಯವಾಹಿನಿಯಲ್ಲಿ ತಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಕ್ರೀಡಾಕೂಟ ಸಂಘಟಿಸಿದ್ದೇವೆ ಎಂದವರು ಹೇಳಿದರು. ದಿನವಿಡೀ ನಡೆಯುವ ಕ್ರೀಡಾಕೂಟಕ್ಕೆ ನ.30ರೊಳಗೆ ಆನ್ಲೈನ್ ನೋಂದಣಿ ಮಾಡಬೇಕು. ಕಬಡ್ಡಿ, ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟಗಳು ಕ್ರೀಡಾಕೂಟದಲ್ಲಿರುತ್ತವೆ. ಮೊದಲು ನೋಂದಾಯಿಸಿದ ಪುರುಷರ 24 ಕಬಡ್ಡಿ, 16 ಮಹಿಳಾ ಕಬಡ್ಡಿ, ತ್ರೋಬಾಲ್ ಮತ್ತು ವಾಲಿಬಾಲ್ ನ ತಲಾ 16 ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿರುತ್ತದೆ ಎಂದವರು ಹೇಳಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಬೇಬಿ ಕುಂದರ್, ಅಖಿಲ ಭಾರತ ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಕ್ರೀಡಾಕೂಟ ಸಂಚಾಲಕ ಸದಾನಂದ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್, ಮಾಜಿ ಅಧ್ಯಕ್ಷ ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.